ಕೋಲಾರ: ಜಿಲ್ಲೆಯಲ್ಲಿ ಅತಿ ಹೆಚ್ಚು ಬೆಳೆಯುವ ಟೊಮ್ಯಾಟೊ ಮತ್ತು ಕ್ಯಾಪ್ಸಿಕಂಗೆ ಬೆಂಬಲ ಬೆಲೆ ನೀಡುವ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅನುಕೂಲ ಮಾಡಿಕೊಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಜಿಲ್ಲೆಯ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಟೊಮ್ಯಾಟೊ ಮತ್ತು ಕ್ಯಾಪ್ಸಿಕಂ ಮಾರುಕಟ್ಟೆ ಇಲ್ಲದೆ ಬೀದಿಗೆ ಎಸೆಯುವ ಪರಿಸ್ಥಿತಿ ನಿರ್ಮಾಣವಾಗಿರುವುದು ನನ್ನ ಗಮನಕ್ಕೆ ಬಂದಿದೆ. ಸರ್ಕಾರ ರೈತರ ಪರವಾಗಿರುವುದರಿಂದ ಆತಂಕಪಡುವ ಅಗತ್ಯವಿಲ್ಲ ಎಂದರು.
ಕರೊನಾದಿಂದ ಎದುರಾಗಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ನಿರಂತರ ಕೆಲಸ ನಿರ್ವಹಿಸುತ್ತಿದೆ. ಕೃಷಿ ಚಟುವಟಿಕೆ ನಿರಂತರವಾಗಿ ನಡೆಯಬೇಕೆಂಬ ಉದ್ದೇಶದಿಂದ ವಿಶೇಷ ಸಡಿಲಿಕೆ ನೀಡಿ ಉಳುಮೆ, ಬಿತ್ತನೆ ಹಾಗೂ ಬೆಳೆಯಲು ಕ್ರಮ ಕೈಗೊಳ್ಳಲಾಗಿದ್ದು, ವಿಶೇಷವಾಗಿ ರಾಗಿ ಬೆಳೆಗೆ ಪ್ರಸ್ತುತ ನೀಡುತ್ತಿರುವ 3150 ರೂ. ಬೆಂಬಲ ಬೆಲೆಯನ್ನು ಶೇ.20 ಹೆಚ್ಚಿಸಬೇಕೆಂದು ಜನಪ್ರತಿನಿಧಿಗಳು ಒತ್ತಾಯ ಹೇರಿರುವುದರಿಂದ ಸಿಎಂ ಜತೆ ಚರ್ಚಿಸಿ ಮರು ಪರಿಶೀಲನೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲೆಯಲ್ಲಿ ಅತಿ ಹೆಚ್ಚು ಮಾವು ಬೆಳೆಯಲಾಗುತ್ತಿದ್ದು, ಮಾರುಕಟ್ಟೆಗೆ ಮಾವು ಸಾಗಣೆ ಮಾಡಲು ಸಾರಿಗೆ ವ್ಯವಸ್ಥೆ ಮಾಡಲಾಗುತ್ತದೆ. ತರಕಾರಿಗಳನ್ನು ರಾಜ್ಯ ಸರ್ಕಾರ ನೇರವಾಗಿ ಖರೀದಿಸಲು ತೀರ್ಮಾನಿಸಿಲ್ಲ. ಹಾಪ್‌ಕಾಮ್ಸ್‌ಗಳು ರೈತರಿಂದ ತರಕಾರಿ ಖರೀದಿಸಿ ಗ್ರಾಹಕರಿಗೆ ಮಾರಾಟ ಮಾಡಲಿದೆ. ಜತೆಗೆ ತೋಟಗಾರಿಕೆ ಇಲಾಖೆ ಮೂಲಕ ತರಕಾರಿ ಮಾರಾಟಕ್ಕೆ ಮಳಿಗೆ ತೆರೆಯಲು ಸಂಬಂಧಪಟ್ಟ ಸಚಿವರು ಚಿಂತಿಸಿದ್ದಾರೆ ಎಂದರು.
ರಾಜ್ಯದಲ್ಲಿ ಲಾಕ್‌ಡೌನ್ ತೆರವಿಗೆ ಸರ್ಕಾರ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಪ್ರಧಾನಮಂತ್ರಿಗಳು ಮಂಗಳವಾರ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದರು.
ಲಾಕ್‌ಡೌನ್ ಘೋಷಣೆಯಾದ ನಂತರ ಜಿಲ್ಲೆಯಲ್ಲಿ ನಮ್ಮ ಇಲಾಖೆ ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸುತ್ತಿದೆ. ಕೃಷಿ ಉತ್ಪನ್ನಗಳಿಗೆ ತೊಂದರೆಯಾಗದಂತೆ ಕಠಿಣ ಕ್ರಮ ಕ್ರಮ ಕೈಗೊಳ್ಳಲಾಗಿದೆ. ಈವರೆಗೆ ಬಿತ್ತನೆ ಬೀಜ, ರಸಗೊಬ್ಬರಕ್ಕೆ ಕೊರತೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದರು.
ಮುಂಗಾರು ಹಂಗಾಮಿಗೆ ಇಲಾಖೆ ಸನ್ನದ್ಧವಾಗಿದೆ. ಬೇಡಿಕೆಗೆ ಅನುಸಾರವಾಗಿ ಬಿತ್ತನೆಬೀಜ, ಗೊಬ್ಬರ ಹಾಗೂ ಔಷಧಗಳನ್ನು ಪೂರೈಕೆ ಮಾಡಲಾಗುವುದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಮಾತನಾಡಿ, ರಾಜ್ಯದಲ್ಲಿ ಮದ್ಯದಂಗಡಿ ತೆರೆಯುವಂತೆ ಬೇಡಿಕೆ ಹೆಚ್ಚಾಗುತ್ತಿದೆ. ಲಾಕ್‌ಡೌನ್ ತೆರವುಗೊಳ್ಳುವವರೆಗೂ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ಪ್ರಧಾನ ಮಂತ್ರಿಗಳು ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ವಿಶೇಷ ಥ್ರಿಲ್ ನೀಡುವ ಸಂಭವವಿದೆ ಎಂದರು.
ಸಂಸದ ಎಸ್.ಮುನಿಸ್ವಾಮಿ, ಶಾಸಕರಾದ ಕೆ.ಶ್ರೀನಿವಾಸಗೌಡ, ಕೆ.ವೈ.ನಂಜೇಗೌಡ, ಆರ್. ಚೌಡರೆಡ್ಡಿ, ಜಿಪಂ ಅಧ್ಯಕ್ಷ ಸಿ.ಎಸ್. ವೆಂಕಟೇಶ್, ಉಪಾಧ್ಯಕ್ಷೆ ಯಶೋದಮ್ಮ, ಡಿಸಿ ಸಿ. ಸತ್ಯಭಾಮ, ಸಿಇಒ ಎಚ್.ವಿ. ದರ್ಶನ್, ಎಸ್ಪಿಗಳಾದ ಕಾರ್ತಿಕ್ ರೆಡ್ಡಿ, ಮಹಮದ್ ಸುಜೀತ, ಎಡಿಸಿ ಬಿ. ಶಿವಸ್ವಾಮಿ, ಉಪವಿಭಾಗಾಧಿಕಾರಿ ಸೋಮಶೇಖರ್, ಜಂಟಿ ಕೃಷಿ ನಿರ್ದೇಶಕ ಡಾ.ಎಚ್.ಕೆ. ಶಿವಕುಮಾರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಗಾಯತ್ರಿ, ಎಪಿಎಂಸಿ ಅಧ್ಯಕ್ಷ ವಡಗೂರು ನಾಗರಾಜ್ ಇತರರಿದ್ದರು.
ತರಕಾರಿ ಮತ್ತು ಹಣ್ಣುಗಳನ್ನು ಹೇಗೋ ವಿಲೇವಾರಿ ಮಾಡಬಹುದು. ಆದರೆ ಪುಷ್ಪೋದ್ಯಮಕ್ಕೆ ಕರೊನಾದಿಂದ ದೊಡ್ಡ ಹೊಡೆತ ಬಿದ್ದಿದೆ, ಧಾರ್ಮಿಕ ಚಟುವಟಿಕೆ, ಸಾಂಸ್ಕೃತಿಕ ಕಾರ್ಯಕ್ರಮ, ದೇವಾಲಯಗಳಲ್ಲಿ ಅಲಂಕಾರ, ಶುಭ ಸಮಾರಂಭ ಸ್ಥಗಿತಗೊಂಡಿರುವುದರಿಂದ ಹೂವು ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಿಗೆ ಪರಿಹಾರ ನೀಡುವ ಬಗ್ಗೆ ಸರ್ಕಾರ ಶೀಘ್ರ ನಿರ್ಧಾರ ತೆಗೆದುಕೊಳ್ಳಲಿದೆ. ಬಿ.ಸಿ.ಪಾಟೀಲ್, ಕೃಷಿ ಸಚಿವ
ರೈತರ ಖಾತೆಗೆ ಹಣ ಜಮೆಗೆ ಒತ್ತಾಯ: ರೈತರ ತುರ್ತು ಅವಶ್ಯಕತೆಗೆ ಪ್ರಧಾನಮಂತ್ರಿ ಸಮ್ಮಾನ್ ಯೋಜನೆಯ 6,000 ರೂ. ಮತ್ತು ರಾಜ್ಯ ಸರ್ಕಾರದ 4000 ರೂ. ಜತೆಗೆ 10,000 ರೂ. ಸೇರಿಸಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೃಷಿ ಮಂತ್ರಿ ಬಿ.ಸಿ ಪಾಟೀಲ್‌ಗೆ ಮನವಿ ಸಲ್ಲಿಸಿತು.
ಜಿಲ್ಲೆಯಲ್ಲಿ ಟೊಮ್ಯಾಟೊ, ಕ್ಯಾಪ್ಸಿಕಂ, ಹುರುಳಿಕಾಯಿ, ಹೂಕೋಸು, ಗಡ್ಡಕೋಸು, ಹಸಿಮೆಣಸಿಕಾಯಿಗೆ ಮಾರುಕಟ್ಟೆಯಿಲ್ಲದೆ ತೋಟದಲ್ಲಿ ನಷ್ಟವಾಗಿದೆ. ನಷ್ಟಕ್ಕೆ ಸರಿಸಮಾನಾಗಿ ಪರಿಹಾರ ನೀಡಬೇಕು, ಎಲ್ಲ ಕೃಷಿ ಉತ್ಪನ್ನಗಳನ್ನು ಕನಿಷ್ಠ ಲಾಭಾಂಶ ನೀಡಿ ಸರ್ಕಾರವೇ ತಕ್ಷಣದಿಂದ ಖರೀದಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ಬಣಿ ಶಿವಪ್ಪ ಮನವಿ ಮಾಡಿದರು.
ಜಿಲ್ಲಾಧ್ಯಕ್ಷ ಟಿ.ಎನ್ ರಾಮೇಗೌಡ, ರಾಜ್ಯ ಕಾರ್ಯದರ್ಶಿ ವೀರಭದ್ರಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಸ್ತೇನಹಳ್ಳಿ ನಾರಾಯಣಸ್ವಾಮಿ, ಜಿಲ್ಲಾ ಉಪಾಧ್ಯಕ್ಷರಾದ ಚಂದ್ರಪ್ಪ, ವೀರೇಂದ್ರ ಪಾಟೀಲ್, ದಿನ್ನೆಹೊಸಹಳ್ಳಿ ರಮೇಶ್ ಹಾಜರಿದ್ದರು.