ಸೋಮವಾರಪೇಟೆ ಮಹಿಳಾ ಸಮಾಜದಲ್ಲಿ ಬುಧವಾರ ಆಯೋಜಿಸಿದ್ದ ಬಿ.ಬಿ.ಶಿವಪ್ಪ ಅವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಮಾತನಾಡಿದರು. ಪ್ರತಾಪ್, ಮಂಜು, ತಿಮ್ಮಶೆಟ್ಟಿ ಇದ್ದರು. 
ಜಿಲ್ಲೆ

ಸಂಕಷ್ಟದ ದಿನಗಳಲ್ಲೂ ಬಿ.ಬಿ.ಶಿವಪ್ಪ ಪಕ್ಷ ನಡೆಸಿದ್ದರು

ಎಂ.ರವಿ

ಸೋಮವಾರಪೇಟೆ: ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ದಿ. ಬಿ.ಬಿ.ಶಿವಪ್ಪ ಅವರ ಅಭಿಮಾನಿಗಳ ಬಳಗದಿಂದ 7ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮ ಇಲ್ಲಿನ ಮಹಿಳಾ ಸಮಾಜದಲ್ಲಿ ಬುಧವಾರ ನಡೆಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಮಾತನಾಡಿ, ಶಿವಪ್ಪ ಅವರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ರಾಜಕಾರಣದಲ್ಲಿ ಮುನ್ನೆಲೆಗೆ ಬಂದರು. ಎ.ಕೆ. ಸುಬ್ಬಯ್ಯ ಅವರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂದರ್ಭ ಬಿಜೆಪಿ ಕಥೆ ಮುಗಿಯಿತು ಎಂದೇ ಎಲ್ಲರೂ ಭಾವಿಸಿದ್ದರು. ಅಂತಹ ಸಂದರ್ಭದಲ್ಲಿ ಶಿವಪ್ಪ ಅವರು ಅಧ್ಯಕ್ಷರಾಗಿ ಪಕ್ಷವನ್ನು ಸಂಕಷ್ಟದ ದಿನಗಳಲ್ಲೂ ಮುನ್ನಡೆಸಿದರು ಎಂದು ಸ್ಮರಿಸಿದರು.
ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಶಿವಪ್ಪ ಅವರು ಪಕ್ಷಕ್ಕೆ ಗಟ್ಟಿ ತಳಪಾಯ ಹಾಕಿದ ಪರಿಣಾಮ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರ ಹಿಡಿಯುವ ಮಟ್ಟಕ್ಕೆ ಬಂತು. ಅಜಾತಶತ್ರುವಾಗಿ ರಾಜಕಾರಣ ಮಾಡಿದ ಅಪರೂಪದ ರಾಜಕಾರಣಿಯಾಗಿದ್ದರು. ಅವರ ಕಾರ್ಯಗಳು ಎಲ್ಲ ನಾಯಕರು ಮತ್ತು ಕಾರ್ಯಕರ್ತರಿಗೆ ಮಾರ್ಗದರ್ಶನವಾಗಬೇಕು ಎಂದರು.

ಮಾಜಿ ಎಂಎಲ್‌ಸಿ ಎಸ್.ಜಿ.ಮೇದಪ್ಪ ಮಾತನಾಡಿ, ರಾಷ್ಟ್ರ ಹಾಗೂ ರಾಜ್ಯ ಕಂಡ ಶ್ರೇಷ್ಠ ವ್ಯಕ್ತಿಯಾಗಿದ್ದರು. ನಿಷ್ಕಳಂಕ, ಪ್ರಾಮಾಣಿಕ, ಜಾತಿ ವರ್ಗವನ್ನು ಮೀರಿದ ಅವರ ಆದರ್ಶ ಪಾಲನೆಯಾಗಬೇಕು. ಶಿವಪ್ಪ ಅವರು ಬಿಜೆಪಿಗೆ ನೀಡಿದ ಕೊಡುಗೆ ಅಪಾರ. ಅವರ ಪತ್ನಿಯಾಗಿದ್ದ ಸುಶೀಲಮ್ಮ ಅವರೂ ಪತಿಯೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ರಾಜ್ಯದಲ್ಲಿ ಬಿಜೆಪಿ ಕಟ್ಟಲು ಶ್ರಮಿಸಿದರು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಶಿವಪ್ಪ ಅವರ ಪುತ್ರ ಪ್ರತಾಪ್ ಶಿವಪ್ಪ, ಸಕಲೇಶಪುರದ ಶಾಸಕ ಮಂಜು, ಅಭಿಮಾನಿ ಬಳಗದ ತಿಮ್ಮಶೆಟ್ಟಿ ಸೇರಿದಂತೆ ನೂರಾರು ಅಭಿಮಾನಿಗಳು ಇದ್ದರು.

ಬಿ.ಬಿ.ಶಿವಪ್ಪ ಹಾಗೂ ಪತ್ನಿ ಸುಶೀಲಮ್ಮ ಅವರ ಭಾವಚಿತ್ರಕ್ಕೆ ಕಾರ್ಯಕರ್ತರು ಪುಷ್ಪಾರ್ಚನೆ ಮಾಡಿದರು. ಇದೇ ಸಂದರ್ಭ ಬಿ.ಬಿ. ಶಿವಪ್ಪ ಅವರ ನಿಕಟವರ್ತಿ, ಇತ್ತೀಚೆಗೆ ನಿಧನರಾದ ಕೈಲಾಸ ಮಾಸ್ಟರ್ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.