ಜಿಲ್ಲೆ

ಯೋಧರ ಸ್ಮರಣೆ ಪ್ರಜೆಗಳ ಹೊಣೆ

Davangere - Desk - Ganesh M K

ಸಿರಿಗೆರೆ: ಜೀವದ ಹಂಗು ತೊರೆದು ದೇಶ ರಕ್ಷಣೆಗಾಗಿ ಸೇವೆ ಸಲ್ಲಿಸುವ ಹಾಗೂ ಹುತಾತ್ಮ ಯೋಧರನ್ನು ನಿರಂತರ ಸ್ಮರಿಸುವುದು ಪ್ರಜೆಗಳ ಜವಾಬ್ದಾರಿ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಬಸವರಾಜ್ ಹೇಳಿದರು.

ಆಲಘಟ್ಟ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಇಂತಹ ಕಾರ್ಯಕ್ರಮದಲ್ಲಿ ಯೋಧರನ್ನು ಗೌರವಿಸುವುದು ಸಂತಸ ತಂದಿದೆ ಎಂದರು.

ದೇಶ ಕಲೆ, ಸಾಹಿತ್ಯ, ಭಾಷೆ, ಸಂಸ್ಕೃತಿಯಲ್ಲಿ ತನ್ನದೇ ಆದ ವಿಶೇಷ ಹೊಂದಿದೆ. ಭಾರತಕ್ಕೆ 75ನೇ ವರ್ಷದ ಸಂಭ್ರಮವನ್ನು ಆಚರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಭಾರತೀಯ ಯೋಧರನ್ನು ಸನ್ಮಾನಿಸುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು.

ಮುಖ್ಯಶಿಕ್ಷಕ ತಿಪ್ಪೇಸ್ವಾಮಿ ಮಾತನಾಡಿ, ದೇಶದ ರಕ್ಷಣೆಯಲ್ಲಿ ಸೈನಿಕರ ಪಾತ್ರ ಮಹತ್ವದ್ದಾಗಿದೆ. ಹಗಲು-ರಾತ್ರಿ ದೇಶವನ್ನು ಕಾಯುತ್ತಿರುವ ಮಹಾನ್ ಯೋಧರಿಗೆ 75ನೇ ವರ್ಷದ ಅಮೃತ ಮಹೋತ್ಸವದ ಕಾರ್ಯಕ್ರಮದಲ್ಲಿ ಸ್ಮರಿಸುವುದು ನಮ್ಮನ್ನು ನಾವು ಗೌರವಿಸಿಕೊಂಡಂತೆ ಆಗಿದೆ ಎಂದರು.
ಶಾಲೆ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ‘ನಮ್ಮ ಮಣ್ಣು ನಮ್ಮ ದೇಶ ಅಭಿಯಾನ’ ಆಚರಿಸಲಾಯಿತು.

ಶಿಕ್ಷಕರಾದ ಶೇಖರಪ್ಪ, ಕುಸುಮಾ, ಭರತ್, ಮಡಿಲು ಸಂಸ್ಥೆ ಕಾರ್ಯದರ್ಶಿ ಆನಂದ್, ಸುಮನ್, ಅಭಿಷೇಕ್, ಸುನಿಲ್, ನಾಗರಾಜ್ ಇತರರಿದ್ದರು.

ಜಿಲ್ಲಾಡಳಿತ, ಜಿಪಂ, ನೆಹರು ಯುವ ಕೇಂದ್ರ ಹಾಗೂ ಮಡಿಲು ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಸಂಸ್ಥೆ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.