ಜಿಲ್ಲೆ

ಅಯ್ಯಪ್ಪ ವ್ರತ ಬದುಕಿನ ಉನ್ನತಿಗೆ ಪ್ರೇರಣೆ: ದಯಾನಂದ ಕತ್ತಲ್‌ಸಾರ್ ಅಭಿಮತ

ಬೆಳ್ತಂಗಡಿ: ಕಾರ್ತಿಕಮಾಸದಲ್ಲಿ ಅಯ್ಯಪ್ಪ ವ್ರತಧಾರಿಗಳು ಶಬರಿಮಲೆಯಾತ್ರೆಗೆ ಮಾಲೆ ಹಾಕುವುದರಲ್ಲಿ ಸಿದ್ಧಾಂತದ ಜತೆ ವೈಜ್ಞಾನಿಕ ಹಿನ್ನೆಲೆ ಇದೆ. ಬ್ರಾಹ್ಮೀ ಮೂಹೂರ್ತದಲ್ಲಿ ಎದ್ದು, 108 ಬಾರಿ ಶರಣು ಕರೆಯುವುದು, ಯೋಗ, ಪ್ರಾಣಾಯಾಮ ಮಾಡುವುದರಿಂದ ಆರೋಗ್ಯದ ಜತೆ ಜ್ಞಾನ ವೃದ್ಧಿಯಾಗುತ್ತದೆ. ಅಯ್ಯಪ್ಪ ಸ್ವಾಮಿಯ ವ್ರತ ನಮ್ಮ ಬದುಕಿನ ಉನ್ನತಿಗೆ ಪ್ರೇರಣೆ ನೀಡುತ್ತದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಹೇಳಿದರು.

ಇಲ್ಲಿನ ಅಯ್ಯಪ್ಪ ಮಂದಿರದ ವಠಾರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ಗುರುವಾಯನಕೆರೆ, ಶ್ರೀ ಅಯ್ಯಪ್ಪಸ್ವಾಮಿ ಬ್ರಹ್ಮಕಲಶೋತ್ಸವ ಸಮಿತಿ ಶ್ರೀ ಅಯ್ಯಪ್ಪ ನಗರ ಯರ್ಡೂರು ಗುರುವಾಯನಕೆರೆ ಹಾಗೂ ಶ್ರೀ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ದ.ಕ.ವತಿಯಿಂದ ಸಾಮಾಜಿಕ ಸಂಸ್ಕಾರ ಮತ್ತು ಸಂಘಟನಾತ್ಮಕ ಉದ್ದೇಶದಿಂದ ಪ್ರಥಮ ಬಾರಿಗೆ ನಡೆದ ಅಯ್ಯಪ್ಪ ಭಕ್ತರ ಮಹಾಸಂಗಮ ‘ಬೆಳ್ತಂಗಡಿ ತಾಲೂಕು ಸಮಾವೇಶ’ದಲ್ಲಿ ಮಾತನಾಡಿದರು.

ಅಯ್ಯಪ್ಪ ಭಕ್ತರ ಪರವಾಗಿ 7ಹಕ್ಕೋತ್ತಾಯಗಳನ್ನು ಸರ್ಕಾರಕ್ಕೆ ಮಂಡಿಸಲಾಯಿತು. ಶ್ರೀ ಅಯ್ಯಪ್ಪ ಸೇವಾ ಟ್ರಸ್ಟ್ ಗುರುವಾಯನಕೆರೆಯ ಅಧ್ಯಕ್ಷ ರಾಜೇಂದ್ರ ನಾಯರ್ ಅಧ್ಯಕ್ಷತೆ ವಹಿಸಿದ್ದರು. ಸಾಸ್ ದ.ಕ.ಜಿಲ್ಲಾ ಅಧ್ಯಕ್ಷ ಗಣೇಶ್ ಪೊದುವಾಳ, ಶ್ರೀ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರತ್ ಕೆಂಬಾರ್ ಮಾತನಾಡಿದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಿತ್ಯಾನಂದ ಕರ್ನಂತೋಡಿ, ಕುಂಜೇರ ಗುರುಸ್ವಾಮಿ, ಸುಕುಮಾರ ಗುರುಸ್ವಾಮಿ, ಭಾಸ್ಕರ ಗುರುಸ್ವಾಮಿ, ಅಯ್ಯಪ್ಪ ಸೇವಾ ಸಮಾಜಂ ದ.ಕ ಜಿಲ್ಲಾ ಕೋಶಾಧಿಕಾರಿ ಆನಂದ ಶೆಟ್ಟಿ ತೊಕ್ಕೊಟ್ಟು, ಜತೆ ಕಾರ್ಯದರ್ಶಿ ಭರತ್ ಮಂಜನಾಡಿ ಉಪಸ್ಥಿತರಿದ್ದರು.

ಸಮಾವೇಶದಲ್ಲಿ ತೆಗೆದುಕೊಂಡ 7 ಹಕ್ಕೊತ್ತಾಯಗಳನ್ನು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಸಂಪತ್ ಬಿ. ಸುವರ್ಣ ಮಂಡಿಸಿ ಸರ್ಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಸಂಪತ್ ಬಿ.ಸುವರ್ಣ ಸ್ವಾಗತಿಸಿದರು. ನಿತಿನ್ ನಿರೂಪಿಸಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಚಿದಾನಂದ ಇಡ್ಕ ವಂದಿಸಿದರು.

ಅಯ್ಯಪ್ಪ ಭಕ್ತರ ಮಹಾಸಂಗಮ ತಾಲೂಕುಮಟ್ಟದ ಸಮಾವೇಶದಲ್ಲಿ ಅಯ್ಯಪ್ಪ ವ್ರತದ ಬಗ್ಗೆ ಹಾಗೂ ಅಯ್ಯಪ್ಪ ಭಕ್ತರಿಗೆ ದೊರೆಯಬೇಕಾದ ಮೂಲಸೌಲಭ್ಯಗಳು, ಬೇಡಿಕೆಗಳ ಬಗ್ಗೆ ಚಿಂತನ ಮಂಥನ ನಡೆದು, ಸರ್ಕಾರಕ್ಕೆ ಹಕ್ಕೋತ್ತಾಯ ಮಂಡಿಸಲಾಗುವುದು. ಸಂಪತ್ ಬಿ.ಸುವರ್ಣ, ಗೌರವಾಧ್ಯಕ್ಷ ಬ್ರಹ್ಮಕಲಶೋತ್ಸವ ಸಮಿತಿ