ವಿರಾಜಪೇಟೆ: ಬೇಟೋಳಿ ರಾಮನಗರದ ಶ್ರೀ ಪುದುಪಾಡಿ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿಯ ಪ್ರಯುಕ್ತ ಶ್ರೀ ಅಯ್ಯಪ್ಪ ಮಹೋತ್ಸವ ಹಾಗೂ ಮಕರ ಜ್ಯೋತಿ ಪೂಜಾ ಕಾರ್ಯಕ್ರಮವು ಮಂಗಳವಾರ ಶ್ರದ್ಧಾಭಕ್ತಿಯಿಂದ ಜರುಗಿತು.
ಧಾರ್ಮಿಕ ಕಾರ್ಯಕ್ರಮಗಳು ದೇವಸ್ಥಾನದ ಅರ್ಚಕರಾದ ವಿಶ್ವನಾಥ್ ಭಟ್ ಹಾಗೂ ವಾಮನಮೂರ್ತಿ ಭಟ್ ಅವರ ನೇತೃತ್ವದಲ್ಲಿ ನಡೆಯಿತು. ಅರ್ಚಕರು ಬೆಳಗ್ಗೆಯಿಂದಲೇ ದೇವತಾ ಪ್ರಾರ್ಥನೆ, ಶ್ರೀ ಗಣಪತಿ ಹೋಮವನ್ನು ನೆರವೇರಿಸಿದರು. ದೇವಸ್ಥಾನದ ಆವರಣದಲ್ಲಿರುವ ಗಣಪತಿ ಸ್ವಾಮಿ, ನಾಗ ಹಾಗೂ ವನದುರ್ಗಾ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ತದನಂತರ ಶ್ರೀ ಅಯ್ಯಪ್ಪ ಸ್ವಾಮಿಗೆ ಅಲಂಕಾರ ಪೂಜೆ, ಕ್ಷೀರಾಭಿಷೇಕ, ಸೀಯಾಳ ಅಭಿಷೇಕ, ತುಪ್ಪದ ಅಭಿಷೇಕ ಹಾಗೂ ಕುಂಕುಮಾರ್ಚನೆ ಭಸ್ಮಾರ್ಚನೆ ಸೇವೆಗಳು ನಡೆದವು.
ದೇವಸ್ಥಾನದ ಆವರಣದಲ್ಲಿ ಹದಿನೆಂಟು ಮೆಟ್ಟಿಲುಗಳಿರುವ ಮಂಟಪದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಅರ್ಚಕರು ಮಹಾಮಂಗಳಾರತಿ ಸೇವೆ ನಡೆಸಿದರು. ತದನಂತರ ಅನ್ನ ಸಂತರ್ಪಣಾ ಕಾರ್ಯಕ್ರಮವು ನಡೆಯಿತು. ಸಂಜೆ ದೇವಸ್ಥಾನದಲ್ಲಿ ಅಯ್ಯಪ್ಪ ಮಾಲಾ ವ್ರತಧಾರಿಗಳಿಂದ ಭಜನೆ ಸೇವೆ ನಡೆಯಿತು.
ಅರ್ಚಕರು ಮಕರಜ್ಯೋತಿ ಪೂಜೆಯನ್ನು ನೆರವೇರಿಸಿದರು. ರುದ್ರಮ್ ಚಂಡೆ ಬಳಗದಿಂದ ಚಂಡೆ ಪ್ರದರ್ಶನ ಹಾಗೂ ವಿನಾಯಕ ಕುಣಿತ ಭಜನಾ ತಂಡದಿಂದ ಕುಣಿತ ಭಜನೆ, ಸ್ಥಳೀಯ ಭಕ್ತರಿಂದ ಭಜನಾ ಕಾರ್ಯಕ್ರಮ ನಡೆಯಿತು. ಅರ್ಚಕರು ಮಹಾ ಪೂಜೆ ನೆರವೇರಿಸಿದರು. ತದನಂತರ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಮಹೋತ್ಸವದ ಪ್ರಯುಕ್ತ ದೇವಸ್ಥಾನವನ್ನು ವಿದ್ಯುತ್ ಅಲಂಕಾರ ಹಾಗೂ ಹೂವುಗಳಿಂದ ಅಲಂಕರಿಸಲಾಗಿತ್ತು. ದೇವಸ್ಥಾನದ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು. ಧಾರ್ಮಿಕ ಕಾರ್ಯಕ್ರಮದಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.