ಜಿಲ್ಲೆ

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಅಯ್ಯಪ್ಪ ಆಯ್ಕೆ

ಮಡಿಕೇರಿ: ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಬೊಳ್ಳಜಿರ ಬಿ.ಅಯ್ಯಪ್ಪ, ಉಪಾಧ್ಯಕ್ಷರಾಗಿ ಬೊಟ್ಟಂಗಡ ಗಣಪತಿ ಹಾಗೂ ಕಾರ್ಯದರ್ಶಿಯಾಗಿ ಚಂದನ್ ನಂದರಬೆಟ್ಟು ಆಯ್ಕೆಯಾಗಿದ್ದಾರೆ.


ನೂತನ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಹಳೆಯ ಅಧ್ಯಕ್ಷರಾಗಿದ್ದ ಪಾರ್ವತಿ ಅಪ್ಪಯ್ಯ ಹಾಗೂ ಬೊಳ್ಳಜಿರ ಬಿ.ಅಯ್ಯಪ್ಪ ಸ್ಪರ್ಧಿಸಿದ್ದು, ಚುನಾವಣೆಯಲ್ಲಿ ೯-೭ ಮತಗಳನ್ನ ಪಡೆಯುವ ಮೂಲಕ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಗೆಲುವು ಸಾಧಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಬೊಟ್ಟಂಗಡ ಗಣಪತಿ ಹಾಗೂ ಕಾರ್ಯದರ್ಶಿ ಸ್ಥಾನಕ್ಕೆ ಚಂದನ್ ನಂದರಬೆಟ್ಟು ಸ್ಪರ್ಧಿಸಿದ್ದು, ಯಾರು ಸ್ಪರ್ಧಿಸದ ಹಿನ್ನಲೆ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಮುಂದಿನ ೫ ವರ್ಷ ಆಡಳಿತ ವಹಿಸಿಕೊಂಡಿದ್ದಾರೆ.


ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅಧಿಕಾರ ವಹಿಸಿಕೊಂಡು ಮಾತನಾಡಿದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಹಿಂದಿನ ಆಡಳಿತ ಮಂಡಳಿಯ ಸದಸ್ಯರು ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಕಾಲೇಜನ್ನು ಉತ್ತಮ ಸ್ಥಾನಗಳಿಗೆ ತೆಗೆದುಕೊಂಡು ಹೊಗಲು ನಮ್ಮ ಆಡಳಿತ ಮಂಡಳಿ ಸಜ್ಜಾಗಿದೆ ಎಂದರು.


ನಾನು ಆಡಳಿತ ಮಂಡಳಿಯಲ್ಲಿ ಇದ್ದುಕೊಂಡೆ ಕಾಲೇಜಿನ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದೇನೆ. ಇದೀಗ ಅಧ್ಯಕ್ಷ ಸ್ಥಾನ ಸಿಕ್ಕಿದ್ದು ಮತ್ತಷ್ಟು ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿದ ಅವರು, ಕಾಲೇಜಿನೊಂದಿಗೆ ಉತ್ತಮ ಭಾಂದವ್ಯದೊಂದಿಗೆ ಎಲ್ಲಾರನ್ನು ಗಣನೆಗೆ ತೆಗೆದುಕೊಂಡು ಜೊತೆಗೆ ಸದಸ್ಯ ಬಲವನ್ನು ಹೆಚ್ಚಿಸುವುದಾಗಿ ತಿಳಿಸಿದರು.


ಈ ಸಂದರ್ಭ ಹಳೆಯ ಆಡಳಿತ ಮಂಡಳಿಯ ಪ್ರಮುಖರು ಹಾಗೂ ನೂತನ ಆಡಳಿತ ಮಂಡಳಿಯ ನಿರ್ದೇಶಕರು ಹಾಜರಿದ್ದರು. ಚುನಾವಣಾ ಅಧಿಕಾರಿಯಾಗಿ ನಂದಿನೆರವಂಡ ಅಪ್ಪಯ್ಯ ಕಾರ್ಯನಿರ್ವಹಿಸಿದರು.