ಜಿಲ್ಲೆ

ಜ.12ರಿಂದ ಅಯ್ಯನಗುಡಿ ಜಾತ್ರೆ - ಅದ್ದೂರಿ ಆಚರಣೆಗೆ ಸಿದ್ಧತೆ

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ಹಲವು ಕಾರಣಗಳಿಂದ ಕೆಲ ವರ್ಷಗಳಿಂದ ಕಳೆಗುಂದಿದ್ದ ತಾಲೂಕಿನ ಪ್ರಸಿದ್ಧ ಶ್ರೀ ಕೆಂಗಲ್ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಬ್ರಹ್ಮ ರಥೋತ್ಸವವನ್ನು ಈ ಬಾರಿ ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ಧತೆ ಆರಂಭಗೊಂಡಿದೆ.

ಈ ಭಾಗದಲ್ಲಿ ಅಯ್ಯನಗುಡಿ ಜಾತ್ರೆ ಎಂದೇ ಹೆಸರಾಗಿರುವ ಕೆಂಗಲ್ ಆಂಜನೇಯಸ್ವಾಮಿ ಜಾತ್ರೆಗೆ ಕಳೆದ ಕೆಲವು ವರ್ಷಗಳಿಂದ ಕೋವಿಡ್, ರಾಸುಗಳಿಗೆ ಚರ್ಮಗಂಟು ರೋಗದ ಕರಿನೆರಳು ಬಿದ್ದಿತ್ತು. ಈ ಬಾರಿ ಅಂತಹ ಆತಂಕಗಳು ಇಲ್ಲದ ಕಾರಣ ಜಾತ್ರೆಯನ್ನು ಅದ್ದೂರಿಯಾಗಿ ನಡೆಸಲು ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ದೇವಾಲಯ ವ್ಯವಸ್ಥಾಪನಾ ಸಮಿತಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

19ಕ್ಕೆ ಬ್ರಹ್ಮ ರಥೋತ್ಸವ

ಜ.12ರಿಂದ 22ರವರೆಗೆ ಜಾತ್ರೆ ನಡೆಯಲಿದ್ದು, ಆರಂಭದಿಂದ ಕೊನೆಯವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಜ.19ರ ಶುಕ್ರವಾರ ಬೆಳಗ್ಗೆ 11.55ರಿಂದ 12.55 ರವರೆಗೆ ಸಲ್ಲುವ ಶುಭ ಅಭಿಜಿನ್ ಲಗ್ನದಲ್ಲಿ ಬ್ರಹ್ಮ ರಥೋತ್ಸವ ನಡೆಯಲಿದೆ.

ಪುರಾಣ ಪ್ರಸಿದ್ದ ಕ್ಷೇತ್ರ

ಬೆಂಗಳೂರು - ಮೈಸೂರು ಹೆದ್ದಾರಿ ಮಗ್ಗುಲಲ್ಲೇ ಇರುವ ಶ್ರೀೀ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯಕ್ಕೆ ಸಾಕಷ್ಟು ಇತಿಹಾಸವಿದೆ. ಈ ದೇವಾಲಯವನ್ನು ಭಕ್ತಿಯಿಂದ 12 ಬಾರಿ ಪ್ರದಕ್ಷಿಣೆ ಹಾಕಿದರೆ ಅಂದುಕೊಂಡ ಸಂಕಲ್ಪ ಈಡೇರುತ್ತದೆ ಎಂಬುದು ನಂಬಿಕೆ. ಕಣ್ವ ಕ್ಷೇತ್ರಾಂತರ್ಗತ ಹಾಗೂ ವ್ಯಾಸ ಮಹರ್ಷಿಗಳು ಕೆಂಪು ಕಲ್ಲಿನಿಂದ ಈ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಕೆಂಪು ಬಣ್ಣದ ದೇವರು ಬೇರೆ ಎಲ್ಲೂ ಇಲ್ಲ ಎಂಬುದು ವಿಶೇಷ. ಈ ದೇವಾಲಯಕ್ಕೆ ಮೈಸೂರಿನ ದಿವಾನರು ಸಾಕಷ್ಟು ಪ್ರಾಮುಖ್ಯತೆ ನೀಡಿದ್ದಾರೆ.

ದೇವಾಲಯದ ಅಭಿವೃದ್ದಿಗಾಗಿ 10 ಎಕರೆ ಜಮೀನನ್ನು ನೀಡಿ, ಶ್ರೀ ಆಂಜನೇಯಸ್ವಾಮಿಗೆ ಒಂದು ಚಿನ್ನದ ಕಣ್ಣು ಹಾಗೂ ಮೀಸೆಯನ್ನು ಸಹ ಕೊಡುಗೆಯಾಗಿ ನೀಡಿದ್ದಾರೆ. ಇದರೊಂದಿಗೆ, ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯ ಅವರು ಆಂಜನೇಯಸ್ವಾಮಿ ಪ್ರಸಾದದಿಂದ ಜನಿಸಿದರೆಂಬ ಹಿನ್ನೆಲೆಯಲ್ಲಿ ಈ ದೇವಾಲಯವನ್ನು ಅವರ 60ನೇ ವರ್ಷದ ಹುಟ್ಟುಹಬ್ಬದ ನೆನಪಿಗಾಗಿ ಜೀರ್ಣೋದ್ದಾರ ಮಾಡಲಾಗಿದೆ ಎನ್ನುತ್ತಾರೆ ದೇವಾಲಯದ ಪ್ರಧಾನ ಅರ್ಚಕ ರವಿಕುಮಾರ್, ಭಟ್ಟರ್ ಮತ್ತು ಅರ್ಚಕ ಶರತ್ ಸಿಂಹನ್.

ದನಗಳ ಮಾರಾಟವೇ ವಿಶೇಷ

ಜಾತ್ರೆ ಅಂಗವಾಗಿ ಕ್ಷೇತ್ರದಲ್ಲಿ 9 ದಿನ ದನಗಳ ಜಾತ್ರೆ ನಡೆಯಲಿದೆ. ವರ್ಷದ ಆರಂಭದಲ್ಲಿ ಬರುವ ಸುಗ್ಗಿ ಹಬ್ಬ (ಸಂಕ್ರಾಂತಿ) ಸಮಯದಲ್ಲಿ ರಾಸುಗಳಿಗೆ ವಿಶೇಷ ಪೂಜೆ ಮಾಡುವ ದಿನದಂದೇ ಆರಂಭವಾಗುವ ಈ ಜಾತ್ರೆ ರಾಜ್ಯದಲ್ಲೇ ಅತಿ ವಿಶೇಷವಾಗಿದೆ. ಕೆಂಗಲ್ ದನಗಳ ಜಾತ್ರೆಯಲ್ಲಿ ರಾಸುಗಳನ್ನು ಮಾರಾಟ ಹಾಗೂ ಖರೀದಿ ಮಾಡಲು ರಾಜ್ಯ ಅಷ್ಟೇ ಅಲ್ಲದೆ ಹೊರ ರಾಜ್ಯಗಳಿಂದಲೂ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗಳ ರೈತರಲ್ಲದೆ ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯದಿಂದಲೂ ಬಂದು ರಾಸುಗಳನ್ನು ಖರೀದಿ ಮಾಡುತ್ತಾರೆ. ತರಹೇವಾರಿ ರಾಸುಗಳು ಇಲ್ಲಿ ಜಮಾವಣೆಗೊಳ್ಳುತ್ತವೆ. ಇಲ್ಲಿ ಕೋಟ್ಯಂತರ ರೂ. ವಹಿವಾಟು ಕೂಡ ನಡೆಯುತ್ತದೆ.

ಜಿಲ್ಲಾಡಳಿತ ಸಜ್ಜು

ಜಾತ್ರೆಯನ್ನು ಈ ಬಾರಿ ಅದ್ದೂರಿಯಾಗಿ ಆಚರಿಸಲು ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ದೇವಾಲಯ ವ್ಯವಸ್ಥಾಪನಾ ಸಮಿತಿ ಈಗಾಗಲೇ ಅಗತ್ಯ ತಯಾರಿಯಲ್ಲಿ ತೊಡಗಿವೆ. ಈಗಾಗಲೇ ಈ ಸಂಬಂಧ ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಸಭೆ ಕೂಡ ನಡೆಸಿದ್ದು, ಜಾತ್ರೆಗೆ ಬೇಕಾದ ಅಗತ್ಯ ಕ್ರಮ ವಹಿಸುವಂತೆ ಸಂಬಂಧಿಸಿದ ಇಲಾಖೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಒಟ್ಟಾರೆ, ಕೆಲವರ್ಷಗಳಿಂದ ನಾನಾ ಕಾರಣಗಳಿಂದ ಕಳೆಗುಂದಿದ್ದ ಅಯ್ಯನಗುಡಿ ಜಾತ್ರೆ ಈ ಬಾರಿ ಕಳೆಗಟ್ಟುವ ಸಾಧ್ಯತೆ ಇದೆ. ಜಾತ್ರೆಯಲ್ಲಿ ಬ್ರಹ್ಮ ರಥೋತ್ಸವ ಕಣ್ತುಂಬಿಕೊಳ್ಳಲು ಹಾಗೂ ರಾಸುಗಳ ಸಪ್ಪಳದ ಸದ್ದನ್ನು ಕಿವಿ ತುಂಬಿಕೊಳ್ಳಲು ಭಕ್ತಗಣ ಸಹ ಕಾಯುತ್ತಿದೆ.

ಈ ಬಾರಿ ರಥೋತ್ಸವ ಹಾಗೂ ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಲು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದೇವೆ. ತೋಟಗಾರಿಕೆ, ಕೃಷಿ, ರೇಷ್ಮೆ ಇಲಾಖೆ ವತಿಯಿಂದ ರೈತರಿಗೆ ಸಿಗುವ ಸೌಲಭ್ಯಗಳ ಕುರಿತು ಅರಿವು ಮೂಡಿಸಲು ಮಳಿಗೆಗಳನ್ನು ತೆರೆಯಲಾಗುವುದು. ಜಾತ್ರೆಗೆ ಆಗಮಿಸುವ ರೈತರು ಹಾಗೂ ರಾಸುಗಳಿಗೆ ಬೇಕಾದ ಅಗತ್ಯ ಸವಲತ್ತುಗಳನ್ನು ನೀಡಲಾಗುವುದು. ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್, ಆಂಬುಲೆನ್ಸ್ ವ್ಯವಸ್ಥೆ ಮತ್ತು ಪ್ರಥಮ ಚಿಕಿತ್ಸಾ ಕೇಂದ್ರ, ರಾಸುಗಳಿಗೂ ಚಿಕಿತ್ಸಾ ಕೇಂದ್ರ ಇರಲಿದೆ.ವಿ.ಬಿ.ಚಂದ್ರಯ್ಯ, ಅಧ್ಯಕ್ಷ, ದೇವಾಲಯ ವ್ಯವಸ್ಥಾಪನಾ ಸಮಿತಿ
ಕೆಂಗಲ್ ಅಯ್ಯನಗುಡಿ ಜಾತ್ರೆ ಎಂದರೆ ಅದರ ಸೊಬಗೇ ಬೇರೆ. ಇಲ್ಲಿ ನಡೆಯುವ ದನಗಳ ಜಾತ್ರೆ ವಿಶೇಷವಾದದ್ದು. ಕೆಲ ವರ್ಷಗಳಿಂದ ವಿವಿಧ ಕಾರಣಕ್ಕೆ ಈ ಸಂಭ್ರಮಕ್ಕೆ ಬ್ರೇಕ್ ಬಿದ್ದಿತ್ತು. ಆದರೆ, ಆಂಜನೇಯನ ದಯೆಯಿಂದ ಈ ಬಾರಿ ಯಾವುದೇ ಆತಂಕವಿಲ್ಲ. ಈ ಹಿನ್ನೆಲೆಯಲ್ಲಿ ಬ್ರಹ್ಮ ರಥೋತ್ಸವ ಹಾಗೂ ರಾಸುಗಳ ಜಾತ್ರೆಯನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದೇವೆ. ರೈತರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಈ ಹಿಂದಿನ ಪರಂಪರೆಯನ್ನು ಉಳಿಸುವ ಕೆಲಸ ಮಾಡಬೇಕು.ವಿ.ಸಿ. ಚಂದ್ರೇಗೌಡ, ವಂದಾರಗುಪ್ಪೆ