ಅಯ್ಯನಗುಡಿ ಜಾತ್ರೆಯಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೇಯಾ ತಳವಾರ ಭರತ ನಾಟ್ಯ ಪ್ರದರ್ಶಿಸಿದರು. 
ಜಿಲ್ಲೆ

ಗ್ರಾಮೀಣ ಸಂಸ್ಕೃತಿ ಜೀವಂತ ಪ್ರತಿಬಿಂಬ ಅಯ್ಯನಗುಡಿ ಜಾತ್ರೆ

ನಾಲತವಾಡ: ಅಯ್ಯನಗುಡಿ ಜಾತ್ರೆ ಕೇವಲ ಒಂದು ಹಬ್ಬವಲ್ಲ, ನಮ್ಮ ಸಂಸ್ಕೃತಿಯ ಜೀವಂತ ಚಲನಚಿತ್ರ. ಹಳ್ಳಿಗಳ ಸಂಸ್ಕೃತಿ, ಕೃಷಿಯಲ್ಲೂ, ಸಂಗೀತದಲ್ಲೂ, ದೇವರ ಭಕ್ತಿಯಲ್ಲೂ ಉಸಿರಾಡುತ್ತಿದೆ. ಈ ಪರಂಪರೆ ಉಳಿವಿಗೆ ನಮ್ಮೆಲ್ಲರ ಸಹಕಾರ ಅವಶ್ಯಕ ಎಂದು ಉಪನ್ಯಾಸಕ ಅಶೋಕ ಹಂಚಲಿ ಹೇಳಿದರು.

ಸಮೀಪದ ಅಯ್ಯನಗುಡಿಯಲ್ಲಿ ಲಿಂ. ಶ್ರೀಮಂತ ಶಂಕರರಾವ ನಾಡಗೌಡ ವೇದಿಕೆಯಲ್ಲಿ ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತೀಯ ಸಂಸ್ಕೃತಿಯ ಮೂಲ ಅಧ್ಯಾತ್ಮದಲ್ಲಿದೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಈ ಅಧ್ಯಾತ್ಮ ಮತ್ತು ಗ್ರಾಮೀಣ ಸಂಸ್ಕೃತಿಯ ಜೀವಂತ ಉದಾಹರಣೆಯಾಗಿದೆ ಅಯ್ಯನಗುಡಿ ಜಾತ್ರೆ. ಪ್ರತಿ ವರ್ಷವೂ ಜಾತ್ರೆಯಲ್ಲಿ ಭಾರತೀಯ ಸಂಸ್ಕೃತಿ, ರೈತ ಜೀವನ, ಜಾನಪದ ಪರಂಪರೆ, ಮತ್ತು ಧಾರ್ಮಿಕ ಕಾರ್ಯಕ್ರಮಗಳು ಸಂಯೋಜಿತವಾಗಿದೆ ಎಂದರು.

ಹಳೆಯ ಕಾಲದಲ್ಲಿ ಎತ್ತುಗಳು ಕೃಷಿ ಮತ್ತು ಸಾರಿಗೆ ವ್ಯವಸ್ಥೆಯ ಕೊಂಡಿಯಾಗಿದ್ದವು. ಎತ್ತುಗಳ ಒಕ್ಕುಲತನ ಈಗ ವಿರಳವಾಗಿದರೂ, ಅಯ್ಯನಗುಡಿ ಜಾತ್ರೆಯಲ್ಲಿ ಇದನ್ನು ಪುನಶ್ಚೇತನಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ರೈತರು ಪರಂಪರೆ ಉಳಿಸಲು ಈ ಜಾತ್ರೆಯ ಮೂಲಕ ಎತ್ತುಗಳ ಮಹತ್ವವನ್ನು ಪುನರುಜ್ಜೀವನಗೊಳಿಸುತ್ತಿದ್ದಾರೆ. ಹಳ್ಳಿಯ ಸಂಸ್ಕೃತಿಯನ್ನು ಜಾನಪದ ಗೀತೆಗಳು, ನಾಟಕಗಳು, ಕುಣಿತಗಳು ಪ್ರತಿಬಿಂಬಿಸುತ್ತವೆ. ಜಾತ್ರೆಗಳಲ್ಲಿ ಡಬಲ್ ಮೀನಿಂಗ್ ಹಾಡುಗಳ ಬದಲು ಶುದ್ಧ ಜಾನಪದ ಗೀತೆಗಳ ಪ್ರದರ್ಶನ ಹೆಚ್ಚಿಸುವ ಅಗತ್ಯವಿದೆ ಎಂದು ತಿಳಿಸಿದರು.

ಎಂ.ಜಿ.ಎಂ.ಕೆ ಶಾಲೆ ಪ್ರಾಚಾರ್ಯ ಡಾ. ಸುರೇಶ ಕೆ. ಹರನಾಳ ಮಾತನಾಡಿ, ಅಯ್ಯನಗುಡಿ ಉತ್ಸವವು ಉತ್ತರ ಕರ್ನಾಟಕದ ಪ್ರಮುಖ ಜಾತ್ರೆಗಳಲ್ಲಿ ಒಂದಾಗಿದ್ದು, ಇತಿಹಾಸ, ಸಂಪ್ರದಾಯ ಮತ್ತು ಜನಪದ ಸಂಸ್ಕೃತಿಯ ಅಮೂಲ್ಯ ತಾಣವಾಗಿದೆ. ಈ ಜಾತ್ರೆಯಲ್ಲಿ ದೇವರ ಭಜನೆ, ಹರಿಕಥೆ, ಕೀರ್ತನೆ, ವಾದ್ಯಗೋಷ್ಠಿ, ಹಾಸ್ಯ, ವಿವಿಧ ಜನಪದ ಕಲೆಗಳ ಪ್ರದರ್ಶನಗಳು ಇರುತ್ತವೆ. ಇದು ಭಕ್ತರಿಗೆ ಆಧ್ಯಾತ್ಮಿಕ ಶಕ್ತಿ ತುಂಬುವ, ಸಮುದಾಯವನ್ನು ಒಂದೆಡೆ ಕಟ್ಟಿ ಹಾಕುವ ಒಂದು ಮಹೋತ್ಸವ ಎಂದು ತಿಳಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಹಾಶಿಂಪೀರ ವಾಲಿಕಾರ ಮಾತನಾಡಿ, ಸಂಸಾರದ ಸಾಮರಸ್ಯ ಹಾಗೂ ಹೊಂದಾಣಿಕೆ ನಮ್ಮ ಜೀವನದ ಒಂದು ಅತ್ಯಗತ್ಯ ಅಂಶವಾಗಿದೆ. ಮಾನವ ಸಂಬಂಧಗಳು, ಕುಟುಂಬ, ಸ್ನೇಹಿತರು ಮತ್ತು ಸಮಾಜದೊಂದಿಗೆ ಹೊಂದಾಣಿಕೆ ಸಾಧಿಸಲು ನಾವು ಪರಸ್ಪರ ಗೌರವ, ಸಹಾನುಭೂತಿ, ಹಾಗೂ ತಾಳ್ಮೆ ಬೆಳೆಸಬೇಕು. ಸ್ಪಷ್ಟ, ವಿನಯಪೂರ್ಣ ಮತ್ತು ಸೌಹಾರ್ದಯುಕ್ತ ಸಂವಹನ ಉತ್ತಮ ಹೊಂದಾಣಿಕೆಗೆ ಸಹಾಯ ಮಾಡುತ್ತದೆ ಎಂದು ಹೇಳಿದರು.

ವೀರೇಶ್ವರ ಕಾಲೇಜಿನ ಪ್ರಾಚಾರ್ಯ ಡಾ.ಡಿ.ಆರ್. ಮಳಖೇಡ, ಡಾ. ಬಲವಂತ ಉಣ್ಣಿಭಾವಿ ಮಾತನಾಡಿ, ಅಯ್ಯನಗುಡಿ ಉತ್ಸವಕ್ಕೆ ಪಟ್ಟಿ ಎತ್ತದಿರುವುದು ವಿಶೇಷವಾಗಿದೆ. ಜಾತ್ರೆಯ ಎಲ್ಲ ಜವಾಬ್ದಾರಿಯನ್ನು ಶಾಸಕ ಅಪ್ಪಾಜಿ ನಾಡಗೌಡ ಅವರು ವಹಿಸುತ್ತಾರೆ. ನಾಡಗೌಡ ಮನೆತನದವರು ವಿಶೇಷವಾಗಿ ವರ್ಷದಲ್ಲಿ ಐದು ಜಾತ್ರೆಗಳನ್ನು ಮಾಡುವ ಮೂಲಕ ಭಕ್ತಿ ಭಾವ ಮೆರೆಯುತ್ತಾರೆ. ಅದಕ್ಕೆ ಅವರಿಗೆ ದೇವರು ಅಧಿಕಾರ ಮತ್ತು ಐಶ್ವರ್ಯ ನೀಡಿದಾನೆ. ಈ ಜಾತ್ರೆ ಭಾವೈಕ್ಯ, ಜಾತ್ಯತೀತ ಸಂಕೇತ. ಗಂಗಾಧರೇಶ್ವರ ಹಾಗೂ ಬಡೆಮಿಯಾ ಒಂದೇ ದೇವಸ್ಥಾನದಲ್ಲಿರುವುದು ರಾಜ್ಯದಲ್ಲೇ ವಿಶೇಷವಾಗಿದೆ ಎಂದರು.

ಪ್ರಶಸ್ತಿ ಪ್ರಧಾನ: ನಾಗಬೇನಾಳ ಶಾಲೆಯ ಶಿಕ್ಷಕ ಮೊಹನ ಬಾಬು, ವಿವಿಧ ಶಾಲೆ ಮಕ್ಕಳು ಸ್ತಬ್ಧ ಚಿತ್ರಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಹಾಗೂ ನಾಲತವಾಡ ಪ್ರಿಮೀಯರ್ ಲೀಗ್‌ನಲ್ಲಿ ವಿಜೇತ ತಂಡಕ್ಕೆ ಬಹುಮಾನ, ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.

ಬಸವರಾಜ ನಾಡಗೌಡ ಪಪಂ ಸದಸ್ಯ ಪೃಥ್ವಿರಾಜ ನಾಡಗೌಡ, ಬಿಜ್ಜೂರ ಗ್ರಾಪಂ ಅಧ್ಯಕ್ಷೆ ಶರಣಮ್ಮ ಹೊಸಮನಿ, ತಾಲೂಕು ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಬಿಜ್ಜೂರ ಗ್ರಾಪಂ ಉಪಾಧ್ಯಕ್ಷ ಲಕ್ಮಣ ರಬ್ಲರ್ ಅಬ್ದುಲ್ ಗನಿ ಖಾಜಿ, ಉಮರಾರುಕ್ ಮೂಲಿಮನಿ, ಹಣಮಂತ ಕುರಿ ಇತರರಿದ್ದರು.