ಜಿಲ್ಲೆ

ಆಯುಷ್ಮಾನ್ ಆರೋಗ್ಯ ಕೇಂದ್ರ ಪರಿಶೀಲನೆ: ಸೂಕ್ತ ಚಿಕಿತ್ಸೆ ನೀಡಲು ಸಿಇಒ ನಂದಿನಿ ಸೂಚನೆ

ಮಂಡ್ಯ: ತಾಲೂಕಿನ ಯಲಿಯೂರು ಮತ್ತು ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದ ಆಯುಷ್ಮಾನ್ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿನ ಸೌಲಭ್ಯದ ಬಗ್ಗೆ ಜಿ.ಪಂ ಸಿಇಒ ಕೆ.ಆರ್.ನಂದಿನಿ ಪರಿಶೀಲನೆ ನಡೆಸಿದರು.

ಆಯುಷ್ಮಾನ್ ಆರೋಗ್ಯ ಕೇಂದ್ರಕ್ಕೆ ಅನಿರೀಕ್ಷಿತ ಭೇಟಿ ನೀಡಿ, ವೈದ್ಯರ ಹಾಜರಾತಿ, ಶೌಚಗೃಹ, ಕುಡಿಯುವ ನೀರು, ಹಾಸಿಗೆ ವ್ಯವಸ್ಥೆ, ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ, ಔಷಧಗಳ ಲಭ್ಯತೆ, ಲ್ಯಾಬ್‌ಗಳ ಕಾರ್ಯನಿರ್ವಹಣೆ, ತುರ್ತು ಸೇವಾ ಸೌಲಭ್ಯಗಳು, ಲಸಿಕೆ ಕಾರ್ಯಕ್ರಮಗಳು ಹಾಗೂ ವಹಿಗಳ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿದ್ದ ಸಾರ್ವಜನಿಕರೊಂದಿಗೆ ಚರ್ಚಿಸಿ, ಸಿಬ್ಬಂದಿಗಳ ಕಾರ್ಯವೈಖರಿ ಹಾಗೂ ಆಸ್ಪತ್ರೆಯಿಂದ ದೊರೆಯುತ್ತಿರುವ ಚಿಕಿತ್ಸಾ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದ ಅವರು, ರೋಗಿಗಳಿಗೆ ಸೂಕ್ತ ಚಿಕಿತ್ಸೆಗಳು ಸೂಕ್ತ ಸಂದರ್ಭದಲ್ಲಿ ದೊರೆಯಬೇಕು ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಆಸ್ಪತ್ರೆಯ ಸ್ವಚ್ಛತೆ ಹಾಗೂ ಆಸ್ಪತ್ರೆಯಲ್ಲಿನ ದಾಖಲಾತಿ ನಿರ್ವಹಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಯಲಿಯೂರು ಗ್ರಾಮದ ಆಯುಷ್ಮಾನ್ ಆರೋಗ್ಯ ಕೇಂದ್ರವನ್ನು ಎ.ಬಿ.ಎ.ಆರ್.ಕೆ ಯೋಜನೆಯಡಿ ನವೀಕರಣಗೊಳಿಸಲಾಗಿದೆ. ಎನ್.ಕ್ಯೂ.ಎ.ಎಸ್ ಮತ್ತು ಕಾಯಕಲ್ಪ ಮಾನದಂಡವನ್ನು ಆಧರಿಸಿ ಆಸ್ಪತ್ರೆಯನ್ನು ಉನ್ನತೀಕರಣಗೊಳಿಸಲಾಗಿದ್ದು, ಆಸ್ಪತ್ರೆಯಲ್ಲಿನ ಸೌಲಭ್ಯಗಳ ಬಗ್ಗೆ ಸಿಇಒ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಯಲಿಯೂರು ಆಸ್ಪತ್ರೆ ವೈದ್ಯ ಎಸ್.ಡಿ.ಚಂದ್ರಶೇಖರ್, ಕೆ.ಶೆಟ್ಟಹಳ್ಳಿ ಆಸ್ಪತ್ರೆ ವೈದ್ಯೆ ಉಷಾ, ಯಲಿಯೂರು ಆಸ್ಪತ್ರೆಯ ಫಾರ್ಮಸಿ ಅಧಿಕಾರಿ ವಿ.ಎನ್.ವಿಜಯ್‌ಕುಮಾರ್, ಪಿಡಿಒ ಪ್ರಸನ್ನ ಇತರರಿದ್ದರು.