ಜಿಲ್ಲೆ

ಆರೋಗ್ಯ ಭದ್ರತೆಗೆ ಆದ್ಯತೆ ನೀಡಿ, ಎಂಎಲ್ ಸಿ ಎಂಟಿಬಿ ನಾಗರಾಜ್ ಕರೆ, ಹೊಸಕೋಟೆಯಲ್ಲಿ ಆಯುಷ್ಮಾನ್ ಕಾರ್ಡ್ ವಿತರಣೆ

Bengaluru Rural

ಹೊಸಕೋಟೆ: ತಾಲೂಕಿನ ಪ್ರತಿ ಗ್ರಾಮದ ಪ್ರತಿಯೊಬ್ಬರೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಮಾಡಿಸಿಕೊಂಡು ಆರೋಗ್ಯ ಭದ್ರತೆ ಹೊಂದಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಮನವಿ ಮಾಡಿದರು.

ಕಸಬಾ ಹೋಬಳಿ ದೊಡ್ಡ ಗಟಕನಬ್ಬೆ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆಯುಷ್ಮಾನ್ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದಲ್ಲಿ ಕರೊನಾ ಸಂಕಷ್ಟದಿಂದ ಜನ ಜೀವನ ಅಸ್ಥವ್ಯಸ್ತಗೊಂಡಿದೆ. ಆದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನತೆಗೆ ಸಮಸ್ಯೆಯಾಗದಂತೆ ಉಚಿತ ಪಡಿತರ, ವೃತ್ತಿಪರ ನಿರುದ್ಯೋಗಿಗಳಿಗೆ ಭತ್ಯೆ ನೀಡಿ ಜೀವನ ನಡೆಸಲು ಅನುವು ಮಾಡಿಕೊಟ್ಟಿದೆ ಎಂದರು.

ಕರೊನಾ ಬಗ್ಗೆ ಅನಗತ್ಯ ಭಯ ಪಡುವುದು ಬೇಡ. ಆದರೆ ನಿರ್ಲಕ್ಷ ವಹಿಸಬಾರದು. ಪ್ರತಿಯೊಬ್ಬರೂ ಸಾರ್ವಜನಿಕವಾಗಿ ಓಡಾಡುವ ಸಂದರ್ಭದಲ್ಲಿ ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಪಾಡಿಕೊಳ್ಳಿ ಹಾಗೂ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಗೊಡ್ಡಗಟಕನಬ್ಬೆ ಗ್ರಾಪಂ ವ್ಯಾಪ್ತಿಯ ಚೀಮಂಡಳ್ಳಿ, ಕಣ್ಣೂರಳ್ಳಿ, ಭಕ್ತರಹಳ್ಳಿ, ಜಿನ್ನಾಗರ, ಗುಟ್ಟಹಳ್ಳಿ, ಪೆತ್ತನಹಳ್ಳಿ, ಚಿಕ್ಕಗಟಕನಬ್ಬೆ, ಪೂಜಾನ ಅಗ್ರಹಾರ ಗ್ರಾಮಗಳಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ವಿತರಣೆಗೆ ಚಾಲನೆ ನೀಡಿದರು.

ದೊಡ್ಡಗಟಕನಬ್ಬೆ ಗ್ರಾಪಂ ಅಧ್ಯಕ್ಷ ಎಸ್.ಟಿ.ಬಿ ಮುನಿರಾಜ್, ತಾಲೂಕು ಬಿಜೆಪಿ ಅಧ್ಯಕ್ಷ ಸತೀಶ್, ಟೌನ್ ಬ್ಯಾಂಕ್ ಉಪಾಧ್ಯಕ್ಷ ಎನ್.ಬಾಲಚಂದ್ರನ್ ಇದ್ದರು.