ಜಿಲ್ಲೆ

ಆರೋಗ್ಯ ಕಾರ್ಡ್ ನೋಂದಣಿ ಪ್ರಕ್ರಿಯೆ ಚುರುಕು

Chitradurga

ಟಿ. ರಾಮಚಂದ್ರ, ಕೊಂಡ್ಲಹಳ್ಳಿ: ಮೊಳಕಾಲ್ಮೂರು ತಾಲೂಕಿನಲ್ಲಿ ಆಯುಷ್ಮಾನ್ ಭಾರತ್- ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ, ಆರೋಗ್ಯ ಕರ್ನಾಟಕ ಕಾರ್ಡ್ ನೋಂದಣಿ ಪ್ರಕ್ರಿಯೆ ಚುರುಕುಗೊಂಡಿದ್ದು, ನಿಗದಿತ ಗುರಿ ಸಾಧನೆಯತ್ತ ಸಾಗಿದೆ.

ತಾಲೂಕಿನ 158551 ಜನಸಂಖ್ಯೆಯಲ್ಲಿ 54,898 ಮಂದಿಯನ್ನು ನೋಂದಾಯಿಸಲಾಗಿದ್ದು, ಕೊಂಡ್ಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಆರೋಗ್ಯ ಕೊಂಡ್ಲಹಳ್ಳಿ, ಕೋನಸಾಗರ, ಮಾರಮ್ಮನಹಳ್ಳಿ, ನೇತ್ರನಹಳ್ಳಿ, ನೇರ‌್ಲಹಳ್ಳಿ, ಉಡೇವು ಮತ್ತಿತರ ಗ್ರಾಮಗಳಲ್ಲಿ ಪ್ರಕ್ರಿಯೆ ನಡೆಯುತ್ತಿದೆ. ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಸಕ್ರಿಯವಾಗಿದ್ದಾರೆ.

ಆಭಾ ಕಾರ್ಡ್ ಎಂದು ಕರೆಯುವ ಆಯುಷ್ಮಾನ್ ಕಾರ್ಡುಗಳ ಮಾಹಿತಿ, ಕಾರ್ಡಿನ ಅಗತ್ಯಗಳನ್ನು ಸಾರ್ವಜನಿಕರು, ಪ್ರತಿ ಮನೆಗೂ ತಲುಪಿಸುವ ಕಾರ್ಯ ನಿತ್ಯವೂ ನಡೆಯುತ್ತಿದೆ. ಶಾಲೆಗಳಿಗೂ ಭೇಟಿ ನೀಡಿ ವಿದ್ಯಾರ್ಥಿಗಳನ್ನೂ ನೋಂದಾಯಿಸಲಾಗುತ್ತಿದೆ. ಸಾಮಾನ್ಯ ಸೇವಾ ಕೇಂದ್ರ, ಗ್ರಾಮಒನ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳ ಮೂಲಕ ಈ ಕಾರ್ಡ್‌ಗಳನ್ನು ನೋಂದಾಯಿಸಿ, ಒದಗಿಸುವ ಕಾರ್ಯ ಸೆಪ್ಟೆಂಬರ್‌ನಿಂದ ನಿರಂತರವಾಗಿದೆ.

ದೇಶದ ಯಾವುದೇ ನೋಂದಾಯಿತ ಆಸ್ಪತ್ರೆಯಲ್ಲಿ ಕಾರ್ಡ್ ಪಡೆದವರು, ಕುಟುಂಬ ಸದಸ್ಯರಿಗೆ ಒಂದು ವರ್ಷಕ್ಕೆ ಗರಿಷ್ಠ 5 ಲಕ್ಷ ರೂ. ವರೆಗಿನ ಉಚಿತ ಚಿಕಿತ್ಸೆಗೆ ನೆರವಾಗುತ್ತದೆ. ಯಾವುದೇ ಶುಲ್ಕ ನೀಡುವಂತಿಲ್ಲ. ನೋಂದಾಯಿತರಿಗೆ 14 ಅಂಕಿಗಳ ವಿಶಿಷ್ಟ ಆರೋಗ್ಯ ಗುರುತಿನ ಸಂಖ್ಯೆ ನೀಡಲಾಗುತ್ತದೆ. ಡಾ.ಬಿ.ಮಧುಕುಮಾರ್, ತಾಲೂಕು ಆರೋಗ್ಯಧಿಕಾರಿ, ಮೊಳಕಾಲ್ಮೂರು.