ಜಿಲ್ಲೆ

ಮೈಸೂರಿನ ಆಯಿಷ್‌ನಲ್ಲಿ ಆಯುಷ್ ಬಾಹ್ಯ ಸೇವೆ ಘಟಕ ಆರಂಭ

ಮಂಜುನಾಥ ತಿಮ್ಮಯ್ಯ

ಮೈಸೂರು: ನಗರದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ(ಆಯಿಷ್) ತೆರೆದಿರುವ ಆಯುಷ್ ಬಾಹ್ಯ ಸೇವೆ ಘಟಕ ಶುಕ್ರವಾರ ಆರಂಭವಾಯಿತು.


ಮಾತು-ಭಾಷೆ ಮತ್ತು ಶ್ರವಣ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ, ತರಬೇತಿ, ಪುನರ್ವಸತಿ, ಸಂಶೋಧನೆ ಮತ್ತು ಸಾರ್ವಜನಿಕ ಶಿಕ್ಷಣಕ್ಕೆ ಹೆಸರುವಾಸಿಯಾಗಿರುವ ಆಯಿಷ್‌ನಲ್ಲಿ ಈ ಘಟಕ ಆಯುಷ್ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಕಾರ್ಯನಿರ್ವಹಣೆ ಮಾಡಲಿದೆ.

ಆಯುರ್ವೇದ, ಯೋಗ, ಪ್ರಕೃತಿಚಿಕಿತ್ಸೆ, ಯುನಾನಿ ಸಿದ್ಧ, ಹೋಮಿಯೋಪತಿ ಚಿಕಿತ್ಸೆ ವಿಧಾನದಲ್ಲಿ ಇಲ್ಲಿ ಆರೋಗ್ಯ ಸೇವೆ ದೊರೆಯಲಿದೆ.
ಪಾರ್ಶ್ವವಾಯು ಅಥವಾ ತಲೆಗೆ ಪೆಟ್ಟು ಬಿದ್ದ ನಂತರ ಕಂಡುಬರಬಹುದಾದ ಸಮತೋಲನದ ಸಮಸ್ಯೆ, ಸ್ನಾಯುಗಳ ಸಮನ್ವಯದ ಕೊರತೆ, ನಡೆಯಲು ಸಮಸ್ಯೆ ಸೇರಿದಂತೆ ಇತರ ತೊಂದರೆಗಳನ್ನು ಎದುರಿಸುವ ಸಂವಹನ ನ್ಯೂನತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಸಮಗ್ರ ಚಿಕಿತ್ಸೆಯನ್ನು ನೀಡಲಾಗುತ್ತದೆ. ಇದುವೇ ಈ ಘಟಕದ ಉದ್ದೇಶ ಮತ್ತು ಗುರಿಯಾಗಿದೆ.

ಸಾಮಾನ್ಯವಾಗಿ ಬೌದ್ಧಿಕ ಅಸಾಮರ್ಥ್ಯಗಳು, ಸ್ವಲೀನತೆ ಮತ್ತು ಅತಿ ಚಟುವಟಿಕೆ, ಗಮನ ಕೊರತೆ ಸಮಸ್ಯೆಯಿರುವ ಮಕ್ಕಳಿಗೆ ಇತರರೊಂದಿಗೆ ಸಂವಹನ ನಡೆಸಲು ತೊಂದರೆ ಇರುತ್ತದೆ. ಹೀಗಾಗಿ, ಇವರ ಆರೋಗ್ಯ ಸುಧಾರಣೆ ಮತ್ತು ಸಮಗ್ರ ಬೆಳವಣಿಗೆಗಾಗಿ ಕ್ರಮಗಳನ್ನು ಕೈಗೊಳ್ಳುವುದು ಅವಕಶ್ಯಕವಾಗಿದೆ. ಈ ನಿಟ್ಟಿನಲ್ಲಿ ಆಯಿಷ್ ಸಂಸ್ಥೆ ಈ ಹೆಜ್ಜೆ ಇಟ್ಟಿದೆ.

ಇಲ್ಲಿನ ಚಿಕಿತ್ಸೆಯ ಒಟ್ಟಾರೆ ಸ್ವಾಸ್ಥೃವನ್ನು ಹೆಚ್ಚಿಸುವುದು, ಮಾನಸಿಕ, ದೈಹಿಕ ಆರೋಗ್ಯ ಮತ್ತು ಸಂವಹನ ನ್ಯೂನತೆಯುಳ್ಳ ವ್ಯಕ್ತಿಗಳ ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ ಎಂದು ಆಯಿಷ್ ನಿರ್ದೇಶಕಿ ಡಾ.ಎಂ.ಪುಷ್ಪವತಿ ತಿಳಿಸಿದರು.

ಆಯುಷ್ ಬಾಹ್ಯ ಸೇವೆ ಘಟಕವನ್ನು ಆಯುಷ್ ಇಲಾಖೆ ಆಯುಕ್ತ ಡಾ.ಶ್ರೀನಿವಾಸಲು ಉದ್ಘಾಟಿಸಿದರು. ಜಿಲ್ಲಾ ಆಯುಷ್ ಅಧಿಕಾರಿ ಡಾ.ಪುಷ್ಪಾ, ಹಿರಿಯ ಅಧಿಕಾರಿ ಡಾ.ಸೀತಾಲಕ್ಷ್ಮೀ, ಆಯುಷ್ ಬಾಹ್ಯ ಸೇವಾ ಘಟಕದ ಅಧ್ಯಕ್ಷೆ ಡಾ.ಸಂಗೀತಾ ಮಹೇಶ್, ಸದಸ್ಯರಾದ ಡಾ.ಶೇಕ್ ಮನ್ಸೂರ್ ಹುಸೇನ್, ಡಾ.ಸಿ.ಐ.ಸುನೀತಾ, ಡಾ.ಕೆ.ಸುಜಾತಾ ಇತರರು ಇದ್ದರು.