ಜಿಲ್ಲೆ

ವೆನ್ಲಾಕ್ ಆಯುಷ್ ಆಸ್ಪತ್ರೆಯಲ್ಲಿ ಶೀಘ್ರ ಸರ್ಜರಿ ಸೌಲಭ್ಯ ಆರಂಭ ಆಯುಷ್ ಜಿಲ್ಲಾ ಅಧಿಕಾರಿ ಡಾ.ಇಕ್ಬಾಲ್ ಮಾಹಿತಿ

Mangaluru - Hariprasad Rai


ಮಂಗಳೂರು : ನಗರದ ವೆನ್ಲಾಕ್ ಆಯುಷ್ ಆಸ್ಪತ್ರೆಯಲ್ಲಿ ಆಗಸ್ಟ್ ಅಂತ್ಯದ ವೇಳೆಗೆ ಸರ್ಜರಿ ಚಿಕಿತ್ಸೆ ಆರಂಭವಾಗಲಿದೆ. ಈಗ
ಆಯುರ್ವೇದ, ಯುನಾನಿ, ನ್ಯಾಚುರೋಪತಿ ಹಾಗೂ ಹೋಮಿಯೋಪತಿ ಚಿಕಿತ್ಸಾ ಸೌಲಭ್ಯವಿದ್ದು, ಇನ್ನು ಶಸ್ತ್ರಚಿಕಿತ್ಸೆಯ ಸೌಲಭ್ಯ ದೊರೆಯಲಿದೆ. ಇದರಿಂದ ವೆನ್ಲಾಕ್ ಆಯುಷ್ ಆಸ್ಪತ್ರೆ ಸರ್ವಸಜ್ಜಿತ ಆಸ್ಪತ್ರೆಯಾಗಿ ರೂಪುಗೊಳ್ಳಲಿದೆ ಎಂದು ಆಯುಷ್ ಜಿಲ್ಲಾ ಅಧಿಕಾರಿ ಡಾ.ಇಕ್ಬಾಲ್ ತಿಳಿಸಿದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಪತ್ರಕರ್ತರಿಗೆ ಆಯುಷ್ ಬೂಸ್ಟರ್ ಕಿಟ್ ವಿತರಣೆ ಹಾಗೂ ಆಯುಷ್ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದ ಅವರು ಎಂಆರ್‌ಪಿಎಲ್ ಸಂಸ್ಥೆ ಸಮಾಜಸೇವಾ ನಿಧಿಯಡಿ ನೀಡಿದ 25 ಲಕ್ಷ ರೂ. ಮೊತ್ತದಲ್ಲಿ ಅತ್ಯಾಧುನಿಕ ಆಪರೇಷನ್ ಥಿಯೇಟರ್ ಸಜ್ಜುಗೊಳಿಸಲಾಗಿದೆ. ಇಲ್ಲಿ ಕ್ಷಾರಸೂತ್ರ ಚಿಕಿತ್ಸೆ ಆರಂಭಿಸಲಿದ್ದು, ತಜ್ಞ ವೈದ್ಯರು ಆಗಮಿಸಿ ಚಿಕಿತ್ಸೆ ನೀಡಲಿದ್ದಾರೆ ಎಂದರು.
ಪ್ರತಿ ವಾರ 10ರಿಂದ 25 ಸರ್ಜರಿ ಸಾಧ್ಯವಿದ್ದು, ಯುನಾನಿಯ ಹಿಜಾಮ ಚಿಕಿತ್ಸಾ ಸೌಲಭ್ಯವೂ ಇಲ್ಲಿದೆ. ಇಲ್ಲಿನ ಫಿಸಿಯೋಥೆರಪಿ ಸೆಂಟರ್‌ನಲ್ಲಿ ಎಲ್ಲ ವಿಧದ ಚಿಕಿತ್ಸೆ ನೀಡಲಾಗುತ್ತದೆ. ಆಧುನಿಕ ಯಂತ್ರದಿಂದ ಹೈಡ್ರೋಥೆರಪಿ ಚಿಕಿತ್ಸೆ ನೀಡಲಾಗುತ್ತಿದೆ. ಸುಸಜ್ಜಿತ ಪ್ರಯೋಗಾಲಯ ಸೌಲಭ್ಯ ಇದೆ. ಗಂಟು ನೋವಿಗೆ ಸರ್ಜರಿ ರಹಿತ ಚಿಕಿತ್ಸಾ ಸೌಲಭ್ಯವೂ ಇಲ್ಲಿದೆ. ಸದ್ಯ ಎಲ್ಲ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಬಿಪಿಎಲ್‌ಕಾರ್ಡ್‌ದಾರರಿಗೆ ಉಚಿತ ಹಾಗೂ ಎಪಿಎಲ್ ಕಾರ್ಡ್‌ದಾರರಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ಅವರು ವಿವರ ನೀಡಿದರು.
ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ಅಜಿತ್‌ನಾಥ್ ಇಂದ್ರ, ಡಾ.ಹೇಮವಾಣಿ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಮಂಗಳುರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಉಪಸ್ಥಿತರಿದ್ದರು. ಬಿ.ಎನ್.ಪುಷ್ಪರಾಜ್ ಕಾರ್ಯಕ್ರಮ ನಿರೂಪಿಸಿದರು.