ರಿಪ್ಪನ್‌ಪೇಟೆ: ಆಹಾರ, ವಿಹಾರ ಸೇರಿದಂತೆ ನಿತ್ಯ ಜೀವನದಲ್ಲಿ ಆಯುರ್ವೇದ ಪದ್ಧತಿಯನ್ನು ಬಳಸಿಕೊಳ್ಳಬೇಕಾದ ಅಗತ್ಯವಿದೆ. ಆಧುನಿಕತೆಯ ಜಂಜಾಟದಲ್ಲಿ ಭಾರತೀಯ ಅನಾದಿ, ಸನಾತನ ವೈದ್ಯ ಪದ್ಧತಿ ಆಯುರ್ವೇದ ಪ್ರಸ್ತುತ ವಿಶ್ವಮಾನ್ಯವಾಗಿದೆ ಎಂದು ಹೊಂಬುಜ ಜೈನ ಮಠದ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು.
ಹೊಂಬುಜ ಜೈನಮಠದಲ್ಲಿ ಆಪ್ತಾಸ್ ಆಯುರ್ವೇದ ಸಂಸ್ಥೆ ಆಯೋಜಿಸಿರುವ 8 ದಿನಗಳ ದೃಢಬಲ ಆಯುರ್ವೇದ ವಸತಿ ಶಿಬಿರಕ್ಕೆ ಶನಿವಾರ ಚಾಲನೆ ನೀಡಿದ ಶ್ರೀಗಳು, ಸರ್ವರೋಗಗಳಿಗೂ ಚಿಕಿತ್ಸಾ ಪರಿಹಾರ ಉಲ್ಲೇಖಿಸಿದ ಋಷಿಮುನಿಗಳು ಪ್ರತಿಯೋರ್ವರ ಆರೋಗ್ಯ ರಕ್ಷಣೆಗೆ ಗಿಡಮೂಲಿಕೆಗಳ ಬಳಕೆಯನ್ನು ದಾಖಲಿಸಿದ್ದಾರೆ. ಸಂಶೋಧನಾ ವಿದ್ಯಾರ್ಥಿಗಳು ಈ ಕುರಿತು ಇನ್ನಷ್ಟು ಅಧ್ಯಯನ ಮಾಡಿ ಆಯುರ್ವೇದ ಶಾಸ್ತ್ರವನ್ನು ನೊಬೆಲ್ ಪ್ರಶಸ್ತಿ ಗಳಿಸುವಷ್ಟು ವಿಶಿಷ್ಟ ಸ್ಥಾನಕ್ಕೆ ಏರಿಸಬೇಕು ಎಂದರು.
ಜೈನ ಆಯುರ್ವೇದ ಪದ್ಧತಿ, ಔಷಧ ತಯಾರಿಕೆ, ಕುಂದಾದ್ರಿ ಬೆಟ್ಟದ ಅಮೂಲ್ಯ ಗಿಡಮೂಲಿಕೆಗಳ ಕುರಿತು ಶ್ರೀಗಳು ವಿವರಿಸಿದರು. ಪೂಜ್ಯಪಾದ ಮುನಿಶ್ರೀಗಳ ಚಿಕಿತ್ಸಾ ಪದ್ಧತಿ ಸಂಶೋಧನೆಗೆ ಯೋಗ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಹೊಂಬುಜ ಅತಿಶಯ ಕ್ಷೇತ್ರವು ಮಾನಸಿಕ, ಶಾರೀರಿಕ, ಸ್ವಾಸ್ಥ್ಯ ರಕ್ಷಣೆಗೆ ಪ್ರಥಮ ಪ್ರಾಶಸ್ತ್ಯ ನೀಡಲಿದೆ ಎಂದರು.
ಶಿಬಿರದಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ. ಜೀವಂಧರ ಜೈನ್ ಮಾತನಾಡಿದರು. ಡಾ. ಅರ್ಹಂತ್ ಕುಮಾರ್, ಡಾ. ಆನಂದ ಕಟ್ಟಿ ಇದ್ದರು. ಡಾ. ಸುಶ್ರೂತ್ ಜೈನ್ ಸ್ವಾಗತಿಸಿದರು. ಹಿತೇಶ್ ನಿರೂಪಿಸಿದರು.