ಗುಂಡ್ಲುಪೇಟೆ: ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಆಯುರ್ವೇದದಲ್ಲಿ ಪರಿಹಾರಗಳಿವೆ ಎಂದು ಆಯುರ್ವೇದ ವೈದ್ಯೆ ಡಾ.ಸುಶ್ಮಿತಾ ರಮೇಶ್ ಹೇಳಿದರು.
ಪಟ್ಟಣದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಶನಿವಾರ ಭಾವಸಾರ್ ಟ್ರಸ್ಟ್ ವತಿಯಿಂದ ಸಾರ್ವಜನಿಕರಿಗೆ ಆಯೋಜಿಸಿದ್ದ ಆಯುರ್ವೇದ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ನಮ್ಮ ದೇಶದಲ್ಲಿ ಆಯುರ್ವೇದಕ್ಕೆ ಸಾವಿರಾರು ವರ್ಷಗಳ ದೀರ್ಘ ಇತಿಹಾಸ ಇದೆ. ಹಿಂದೆ ಯಾವುದೇ ಅನಾರೋಗ್ಯಗಳಿಗೆ ಮನೆಮದ್ದುಗಳ ಮೂಲಕವೇ ಪರಿಹಾರ ಕಂಡುಕೊಳ್ಳಲಾಗುತ್ತಿತ್ತು. ನಂಜನಗೂಡಿನಲ್ಲಿ 113 ವರ್ಷಗಳಿಂದ ಬಿ.ವಿ.ಪಂಡಿತರ ಸಂಸ್ಥೆಯು ಔಷಧ ತಯಾರಿಸುತ್ತಾ ಪಾರಂಪರಿಕ ಮತ್ತು ನೈಸರ್ಗಿಕ ಚಿಕಿತ್ಸೆ ನೀಡುತ್ತಿದೆ. 63 ವರ್ಷಗಳಿಂದ ಆಯುರ್ವೇದ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯಲ್ಲಿ ಆಸ್ತಮಾ, ಚರ್ಮರೋಗ, ಸಂಧಿವಾತ ಸೇರಿದಂತೆ ಎಲ್ಲ ರೀತಿಯ ಮೂಲಕ ಸಾವಿರಾರು ಜನರ ಆರೋಗ್ಯ ರಕ್ಷಣೆ ಮಾಡುತ್ತಿದೆ. ಆಯುರ್ವೇದದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಸಲುವಾಗಿ ಉಚಿತ ಶಿಬಿರಗಳನ್ನು ನಡೆಸಿ ಸ್ಥಳದಲ್ಲಿಯೇ ಪರಿಹಾರ ಕೊಡಲಾಗುತ್ತಿದೆ ಎಂದು ಹೇಳಿದರು.
ಸಂಸ್ಥೆಯ ಸಂಯೋಜಕಿ ಪುಷ್ಪಾ ಮಾತನಾಡಿ, ಈಗಾಗಲೇ ಸಂಸ್ಥೆಯು ತಾಲೂಕು ಹಾಗೂ ಜಿಲ್ಲೆಯಲ್ಲಿ ಉಚಿತ ಶಿಬಿರಗಳನ್ನು ನಡೆಸಿ ಸಾವಿರಾರು ಸಾರ್ವಜನಿಕರಿಗೆ ಆಯುರ್ವೇದ ಚಿಕಿತ್ಸೆ ದೊರಕುವಂತೆ ಮಾಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ನಾಗೇಶ್, ರಾಮೇಶ್ವರ ದೇವಾಲಯ ಪ್ರಧಾನಾ ಅರ್ಚಕ ಶಂಕರನಾರಾಯಣ್ ಜೋಯಿಸ್, ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್.ಮಹದೇವಸ್ವಾಮಿ, ಭಾವಸಾರ್ ಕ್ಷತ್ರಿಯ ಸಮಾಜದ ಉಪಾಧ್ಯಕ್ಷ ಇ.ಎನ್.ಮೋಹನ್ ರಾವ್ ನಾಯಕ್, ಪ್ರಧಾನ ಕಾರ್ಯದರ್ಶಿ ಎಂ.ಶಿವಕುಮಾರ್ ಆಷ್ಟಕರ್, ಖಜಾಂಚಿ ಪಿ.ಜಿ.ವಿಶ್ವನಾಥರಾವ್ ಪತಂಗೆ, ಮುಖಂಡರಾದ ವಿ.ಎಸ್.ನವೀನ್ ವಾದೋನ್ನೆ, ವಿ.ಎಸ್.ಶಂಕರ್‌ರಾವ್ ವಾದೋನ್ನೆ, ಯುವ ಬ್ರಿಗೇಡ್ ಅಧ್ಯಕ್ಷ ಅಜಯ್‌ಗೌತಮ್ ಅಷ್ಟಕರ್, ಮಹಿಳಾ ಮಂಡಲಿಯ ಅಧ್ಯಕ್ಷೆ ಕಲ್ಯಾಣಿ ವಾದೋನ್ನೆ, ಉಪಾಧ್ಯಕ್ಷೆ ಬನಶಂಕರಿ ಪತಂಗೆ, ಟ್ರಸ್ಟಿ ಎಂ.ಸತೀಶ್ ಅಷ್ಟಕರ್ ಇತರರು ಇದ್ದರು.