ಜಿಲ್ಲೆ

ಆಯುರ್ವೇದ ಚಿಕಿತ್ಸೆಗೆ ಗಿಡಮೂಲಿಕೆಗಳ ಬಳಕೆ: ಜಿಪಂ ಸಿಇಒ ಕೆ.ಆರ್.ನಂದಿನಿ ಹೇಳಿಕೆ

ಮಂಡ್ಯ: ಗಿಡಮೂಲಿಕೆಗಳ ಮೂಲಕ ಆಯುರ್ವೇದ ಚಿಕಿತ್ಸೆ ನೀಡುವುದರಿಂದ ಮನುಷ್ಯನ ಆರೋಗ್ಯ ಕಾಪಾಡುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಹೇಳಿದರು.

ನಗರದ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆ, ಅನನ್ಯ ಹಾರ್ಟ್, ಅಕ್ಷಯ ಸಿರಿ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಆಯುರ್ವೇದ ಆರೋಗ್ಯ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಆಯುರ್ವೇದ ಭಾರತೀಯ ವೈದ್ಯ ಪದ್ಧತಿಯಾಗಿದೆ. ಯುನಾನಿ, ಯೋಗ, ನ್ಯಾಚುರೋಪತಿ ಮತ್ತು ಸಿದ್ದ ಭಾರತದಲ್ಲಿ ಗುರುತಿಸಲ್ಪಟ್ಟ ಆಯುರ್ವೇದವಾಗಿದೆ. ಇವು ಪರ್ಯಾಯ ಚಿಕಿತ್ಸಾ ಪದ್ಧತಿಗಳಾಗಿವೆ, ಇವುಗಳನ್ನು ’ಆಯುಷ್’ ಎಂಬ ಸಂಕ್ಷಿಪ್ತ ರೂಪದಡಿ ಕರೆಯಲಾಗುತ್ತದೆ. ಪ್ರಕೃತಿದತ್ತವಾಗಿ ಇರುವ ಗಿಡಮೂಲಿಕೆಗಳನ್ನು ಬಳಸಿಕೊಂಡು ಚಿಕಿತ್ಸೆ ನೀಡುವ ವಿಧಾನವಾಗಿದೆ ಎಂದರು.

ವೈದ್ಯ ಡಾ.ಲೋಕೇಶ್ ಮಾತನಾಡಿ, ಆಯುರ್ವೇದಕ್ಕೆ ಐದು ಸಾವಿರ ವರ್ಷದ ಇತಿಹಾಸವಿದೆ. ನಾವು ಪ್ರತಿದಿನ ಆಯುರ್ವೇದ ಜತೆ ಬದುಕುತ್ತಿದ್ದೇವೆ. ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಯುರ್ವೇದ ಸಹಕಾರಿ ಆಗಿದೆ ಎಂದು ಸಲಹೆ ನೀಡಿದರು.

ಜಿಲ್ಲಾ ಕಾರಾಗೃಹ ಅಧೀಕ್ಷಕ ಟಿ.ಕೆ.ಲೋಕೇಶ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಆಯುಷ್ ಅಧಿಕಾರಿ ಡಾ.ಪುಷ್ಪಾ, ಡಾ.ಪ್ರಸನ್ನಕುಮಾರ್, ಡಾ.ಕುಸುಮಾ, ಡಾ.ಪ್ರವೀಣ್, ಡಾ.ಭಾಗ್ಯಲಕ್ಷ್ಮೀ, ಡಾ.ಶ್ರೀನಿವಾಸ್, ಅನನ್ಯ ಹಾರ್ಟ್ ಸಂಸ್ಥೆ ಅಧ್ಯಕ್ಷೆ ಬಿ.ಎಸ್.ಅನುಪಮಾ ಇತರರಿದ್ದರು.