ಜಿಲ್ಲೆ

ಆಯುರ್ವೇದ, ಯೋಗ ಪದ್ಧತಿಗಿದೆ ಜನಪ್ರಿಯತೆ: ಡಿಸಿಎಂ ಡಿಕೆಶಿ ಹೇಳಿಕೆ

ಹರೀಶ್​​ ಕೆ.ಸಿ.

ಬೆಂಗಳೂರು: ಹೊಸ ಪದ್ಧತಿಯ ವೈದ್ಯ ಚಿಕಿತ್ಸೆಗಳಿದ್ದರೂ ಆಯುರ್ವೇದ, ಯೋಗ ಪದ್ಧತಿಗೆ ಇರುವ ಜನಪ್ರಿಯತೆ ಕಡಿಮೆಯಾಗಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್​ ಹೇಳಿದರು.

ನಗರದ ಸರ್ಕಾರಿ ಆಯುರ್ವೇದ ವೈದ್ಯಕಿಯ ಮಹಾ ವಿದ್ಯಾಲಯದ ಪುರುಷರ ವಸತಿ ನಿಲಯ ಹಾಗೂ ಹೈಟೆಕ್​ ಪಂಚಕರ್ಮ ಕೊಠಡಿ ಉದ್ಘಾಟಿಸಿ ಮಾತನಾಡಿದರು. ಆರೋಗ್ಯ ಉಳಿಸಿಕೊಳ್ಳಲು 5 ಸಾವಿರ ವರ್ಷಗಳ ಹಿಂದೆ ಪಾಲಿಸಿಕೊಂಡು ಬಂದ ಪದ್ಧತಿ ಆಯುರ್ವೇದ. ಇದು ಭಾರತದ ಆಸ್ತಿ. ಇದನ್ನು ನಾವು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ನಮ್ಮ ದೇಶದ ಆಯುರ್ವೇದ, ಯೋಗ ಹಾಗೂ ಆಧ್ಯಾತ್ಮಿಕತೆಯನ್ನು ವಿಶ್ವ ಗಮನಿಸಿ ಪಾಲಿಸುತ್ತಿದೆ. ವಿಶ್ವದುದ್ದಗಲಕ್ಕೂ ಇವುಗಳಿಗೆ ಗೌರವ ಸಿಗುತ್ತಿದೆ. ಆಧುನಿಕ ಕಾಲದಲ್ಲೂ ಆಯುರ್ವೇದ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನಮಿಸಲು ಬಯಸುತ್ತೇನೆ ಎಂದರು.

ದೇಶದಲ್ಲಿ ಅತಿ ಹೆಚ್ಚು ಮೆಡಿಕಲ್​ ಕಾಲೇಜುಗಳಿರುವುದು ನಮ್ಮ ರಾಜ್ಯದಲ್ಲಿ. ಆಯುರ್ವೇದಕ್ಕೆ ಮಹಾರಾಷ್ಟ್ರ ನಂತರ ನಮ್ಮ ರಾಜ್ಯದಲ್ಲಿ ಹೆಚ್ಚಿನ ಪೋತ್ಸಾಹ ನೀಡಲಾಗುತ್ತಿದೆ. ಆಯುರ್ವೇದ ನಮ್ಮ ಮೂಲ. ನಾವು ನಮ್ಮ ಮೂಲವನ್ನು ಮರೆಯಬಾರದು. ಸರ್ಕಾರಿ ಆಯುರ್ವೇದ ಆಸ್ಪತ್ರೆಗೆ ನಾನು 15 ದಿನದ ನಂತರ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತೇನೆ. ನೀವು ನನಗೆ ಚಿಕಿತ್ಸೆ ನೀಡಲು ಸಿದ್ಧರಾಗಬೇಕು. ನೀವು ನೀಡುವ ಉತ್ತಮ ಚಿಕಿತ್ಸೆಯಿಂದ ರೋಗಿಗಳು ನಿಮ್ಮನ್ನು ಹುಡುಕಿಕೊಂಡು ಬರಬೇಕು ಎಂದು ಡಿಸಿಎಂ ಹೇಳಿದರು.

5 ಬೆಡ್​ ಆಯುರ್ವೇದ ಚಿಕಿತ್ಸೆಗೆ ಮೀಸಲು: ಆಯುರ್ವೇದ ಜಿಕಿತ್ಸಾ ಪದ್ಧತಿಗಳನ್ನ ಜನರಿಗೆ ಸುಲಲಿತವಾಗಿ ಒದಗಿಸುವ ನಿಟ್ಟಿನಲ್ಲಿ ತಾಲೂಕು ಆಸ್ಪತ್ರೆಗಳಲ್ಲಿ 5 ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ 10 ಬೆಡ್​ಗಳ ಆಯುರ್ವೇದಿಕ್​ ಚಿಕಿತ್ಸಾ ಪದ್ಧತಿಗಳನ್ನು ಅಳವಡಿಸಲು ಯೋಜನೆ ರೂಪಿಸಲಾಗಿದೆ. ರಾಜ್ಯದ 4 ವಿಭಾಗಗಳಲ್ಲಿ ಹೈಟೆಕ್​ ಪಂಚಕರ್ಮ ಚಿಕಿತ್ಸೆ ಕಲ್ಪಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಹೇಳಿದರು.ಆಯುರ್ವೇದ ಪದ್ದತಿ ಅನುಸರಿಸುವುದರಿಂದ ಕಾಯಿಲೆಗಳು ಬರದಂತೆ ಮುಂಚಿತವಾಗಿಯೇ ಮುನ್ನೆಚ್ಚರಿಕೆ ವಹಿಸಬಹುದು. ಆಯುರ್ವೇದವನ್ನ ನಮ್ಮ ಆಹಾರ ಪದ್ದತಿಯಲ್ಲಿ ಅಳವಡಿಸಿಕೊಳ್ಳುವುದು ಬಹುಮುಖ್ಯ. ಇದರಿಂದಾಗಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.

18 ಹೈಟೆಕ್​ ಪಂಚಕರ್ಮ ಕೊಠಡಿ: ಬೆಂಗಳೂರಿನ ಆಯುರ್ವೇದಿಕ್​ ಕಾಲೇಜು ಆವರಣದಲ್ಲಿ ಹೈಟೆಕ್​ ಪಂಚಕರ್ಮ ಕೊಠಡಿಗಳನ್ನು ಅಂದಾಜು 3 ಕೋಟಿ ರೂ.ವೆಚ್ಚದಲ್ಲಿ ನವೀಕರಿಸಲಾಗಿದೆ. ಜನರಿಗೆ ಅತ್ಯಾಧುನಿಕ ಸೌಕರ್ಯವುಳ್ಳ ಸುಸಜ್ಜಿತ 18 ಹೈಟೆಕ್​ ಪಂಚಕರ್ಮ ಕೊಠಡಿಗಳನ್ನು ವಿಶೇಷ ಅತ್ಯಾಧುನಿಕ ಸೌಕರ್ಯಗಳೊಂದಿಗೆ ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಿಸಲಾಗಿದೆ. ಚಿಕಿತ್ಸೆಯಿಂದ ಸಾಂಕ್ರಾಮಿಕವಲ್ಲದ ಜೀವನ ಶೈಲಿಯ ನಿರ್ವಹಣಾ ಲೋಪದಿಂದಾಗುವ (ಲೈಫ್​​​ ಸ್ಟೆಲ್​ ಡಿಸಾರ್ಡರ್​) ಖಾಯಿಲೆಗಳಿಗೆ ಮತ್ತು ಎಲ್ಲ ರೀತಿಯ ವಾತಜನಿತ ಖಾಯಿಲೆಗಳಿಗೆ ಹೆಚ್ಚಿನ ಉಪಯೋಗವಾಗುತ್ತದೆ.ಚಿಕಿತ್ಸಾ ಪದ್ಧತಿಯ ಪ್ರಯೋಜನವನ್ನು ಜನರು ಪಡೆದುಕೊಳ್ಳುಬಹುದು. ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ದೊರೆಯಲಿದೆ. ಕೊಠಡಿಗಳಲ್ಲಿ ಪ್ರತ್ಯೇಕ ಪಂಚಕರ್ಮ ಚಿಕಿತ್ಸೆಗೆ ಬೇಕಾದ ಅತ್ಯಾಧುನಿಕ ಸೌಲಭ್ಯಗಳು ಕೊಠಡಿಯಲ್ಲೆ ಇರುವುದರಿಂದ ಶ್ರೇಷ್ಠ ದರ್ಜೆಯ ಪಂಚಕರ್ಮ ಚಿಕಿತ್ಸೆಯು ಲಭ್ಯವಾಗುತ್ತದೆ.