ಮಂಗಳೂರು: ಅನೇಕ ಸ್ವಾಮೀಜಿಗಳು ಕೂಡ ರಾಮ ಮಂದಿರ ಉದ್ಘಾಟನೆಗೆ ಹೋಗಲ್ಲ ಅಂತಿದ್ದಾರೆ. ಮಂದಿರಕ್ಕೆ ಹೋಗೋಕೆ ಯಾರ ಅನುಮತಿಯೂ ಬೇಕಿಲ್ಲ. ಮಂದಿರದಲ್ಲಿ ರಾಜಕೀಯ ವಾತಾವರಣ ನಿರ್ಮಾಣ ಸರಿಯಲ್ಲ ಅಂತ ಜಗದ್ಗುರು ಸ್ವಾಮೀಜಿಗಳೇ ಹೇಳ್ತಿದಾರೆ. ಮತ್ತು ಮಂದಿರ ಉದ್ಘಾಟನೆ ಸಂದರ್ಭದಲ್ಲೇ ಜನರು ಹೋಗಬೇಕಂತ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರಾಮಮಂದಿರ ನಿರ್ಮಾಣ ಅತ್ಯಂತ ಸಂತಸದ ವಿಚಾರ, ಅಲ್ಲಿಗೆ ಎಲ್ಲರೂ ಹೋಗಬೇಕು. ಆದರೆ ಇದು ಪಾಲಿಟಿಕಲ್ ಕ್ಯಾಂಪೇನ್ ಆಗಬಾರದು. ನಮಗೆಲ್ಲರಿಗೂ ಅಲ್ಲಿಗೆ ಹೋಗಲು ಆಸೆ ಇದೆ. ನಮ್ಮ ದೇಶದಲ್ಲಿ ಇದು ಒಳ್ಳೆಯ ಬೆಳವಣಿಗೆ, ಮಂದಿರ ಉದ್ಘಾಟನೆ ಸಂದರ್ಭ ರಾಜ್ಯದ ದೇವಸ್ಥಾನಗಳಲ್ಲಿ ಪ್ರಾರ್ಥನೆ ಇದೆ. ದೇವಸ್ಥಾನದ ಬಗ್ಗೆ ಗೌರವ ಎಲ್ಲರಿಗೂ ಇದೆ. ಆದರೆ ದೇವರು, ಧಾರ್ಮಿಕ ನಂಬಿಕೆ, ಆಚರಣೆಗಳಿಗೆ ರಾಜಕಾರಣ ಬೆರೆಸಬಾರದು ಎಂದು ಅವರು ಅಭಿಪ್ರಾಯಪಟ್ಟರು.
- ರಾಜಕೀಯ ಲಾಭಕ್ಕೆ ಬಳಕೆ
ಮಂದಿರ ಉದ್ಘಾಟನೆ ಸಮಾರಂಭವನ್ನು ರಾಜಕೀಯ ಲಾಭ ಮತ್ತು ಚುನಾವಣೆಗೋಸ್ಕರ ಬಳಸಲಾಗ್ತಿದೆ. ದೇವಸ್ಥಾನಗಳು ಇರೋದು ನಮಗಾಗಿ, ಭಕ್ತಿಯಿರೋರು ಹೋಗ್ತಾರೆ. ಸ್ವ ಇಚ್ಛೆಯಿಂದ ಎಲ್ಲರೂ ಹೋಗ್ತಾರೆ, ಹೋಗದಿದ್ರೆ ಟೀಕೆ ಮಾಡಬಾರದು ಎಂದರು.
ಡಿಸಿಎಂ ವಿಚಾರದಲ್ಲಿ ಯಾವುದೇ ಚರ್ಚೆ ಇಲ್ಲ. ಅದೆಲ್ಲ ಪಕ್ಷದ ಆಂತರಿಕ ವಿಚಾರ. ನನ್ನ ಹೆಸರು ಏನೂ ಇಲ್ಲ, ಅದೆಲ್ಲ ಹೈಕಮಾಂಡ್ ನಿರ್ಧಾರ ಎಂದು ಅವರು ಹೇಳಿದರು.
- ಯತ್ನಾಳ್ ದಾಖಲೆ ಕೊಟ್ಟಿಲ್ಲ
ಯತ್ನಾಳ್ ತಾನು ಮಾಡುತ್ತಿರುವ ಆರೋಪಗಳ ಬಗ್ಗೆ ಇಲ್ಲಿಯ ತಜನಕಯಾವುದೇ ದಾಖಲೆ ಕೊಟ್ಟಿಲ್ಲ. ಬಿಜೆಪಿ ವಿರುದ್ದದ ಆರೋಪದ ಮಾಹಿತಿ ಕೊಡಲು ಹೇಳಿದ್ದೇವೆ. ಮೌಖಿಕವಾಗಿ ಯತ್ನಾಳ್ ಬಳಿ ದಾಖಲೆ ಕೊಡಲು ಹೇಳಿದ್ದೇವೆ. ಅಪಾದನೆ ಮಾಡೋದ್ರ ಜೊತೆಗೆ ತನಿಖಾ ಸಮಿತಿ ಮುಂದೆ ಕೊಡಲು ಹೇಳಿದ್ದೇವೆ. ಆಯೋಗದ ವಿಚಾರಣೆ ವೇಳೆ ನೀಡಿದ್ರೆ ಉಪಯೋಗ ಆಗುತ್ತೆ ಅಂತ ಸಲಹೆ ನೀಡಿದ್ದೇನೆ ಎಂದರು.
ನೈತಿಕ ಪೊಲೀಸ್‌ಗಿರಿ ಸರಿಯಲ್ಲ, ಅದರ ವಿರುದ್ದ ಕಟ್ಟುನಿಟ್ಟಿನ ಕ್ರಮ ಬಿಜೆಪಿ ಕಾರ್ಯಕರ್ತರ ಮೇಲೆ ಕೇಸ್ ಆದರೆ ಹಿಂದುಗಳ ಮೇಲೆ ಕೇಸ್ ಎಂದು ಬಿಂಬಿಸಲಾಗುತ್ತಿದೆ. ಆದರೆ ಕಾಂಗ್ರೆಸ್ ಕಾರ್ಯಕರ್ತರ ವಿಷಯ ಬಂದಾಗ ಕಾಂಗ್ರೆಸ್ ಕಾರ್ಯಕರ್ರರಾಗಿ ಮಾತ್ರ ಗುರುತಿಸಲ್ಪಡುತ್ತಾರೆ. ನಾವೆಲ್ಲ ಹಿಂದೂಗಳಲ್ವಾ? ಬಿಜೆಪಿ ಸರ್ಕಾರ ಹೇಳಿದ್ದನ್ನ ಯಾವುದನ್ನೂ ಜಾರಿಗೆ ತಂದಿಲ್ಲ. ಕೇಂದ್ರದ ಅಧಿಕಾರಿಗಳೇ ರಾಜ್ಯಕ್ಕೆ ಬಂದಾಗ ಇದೆಲ್ಲ ಹೇಗೆ ಮಾಡಿದ್ರಿ? ಎಂದು ಬೆರಗಿನಿಂದ ಪ್ರಶ್ನಿಸುತ್ತಾರೆ ಎಂದು ಅವರು ಹೇಳಿದರು.