ಉಡುಪಿ: ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಪ್ರಸ್ತುತ ಗರ್ಭಗುಡಿಯ ಉಭಾಪೀಠದ ಮೇಲೆ ಸ್ತಂಭಗಳನ್ನು ಜೋಡಣೆ ಮತ್ತು ಗೋಡೆ ನಿರ್ಮಾಣ ನಡೆಯುತ್ತಿದೆ. ದೇಶಾದ್ಯಂತದಿಂದ ಆಗಮಿಸುವ ಲಕ್ಷಾಂತರ ಭಕ್ತರ ಅನುಕೂಲಕ್ಕಾಗಿ 25,000 ಜನರ ವಸತಿ ಸಾಮರ್ಥ್ಯದ ಬೃಹತ್ ಯಾತ್ರಿ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಅಯೋಧ್ಯಾ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯ ಹಾಗೂ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಮಂಗಳವಾರ ಅಯೋಧ್ಯೆಗೆ ಭೇಟಿ ನೀಡಿ, ರಾಮ ಮಂದಿರ ನಿರ್ಮಾಣ ಕಾರ್ಯ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು. ಮುಂದಿನ ಹತ್ತು ದಿನಗಳಲ್ಲಿ ಮೇಲ್ಛಾವಣಿಯ ಶಿಲಾ ಬೀಮ್ ಮತ್ತು ಶಿಲಾ ಹೊದಿಗೆಗಳನ್ನು ಅಳವಡಿಸುವ ಕಾರ್ಯ ಆರಂಭವಾಗಲಿದೆ. ಮಂದಿರದಲ್ಲಿ ಪ್ರತಿಷ್ಠಾಪಿಸಲಾಗುವ ಶ್ರೀ ರಾಮ, ಲಕ್ಷ್ಮಣ, ಸೀತಾ ವಿಗ್ರಹಗಳ ನಿರ್ಮಾಣಕ್ಕಾಗಿ ಕರ್ನಾಟಕದ ಹೆಗ್ಗಡೆ ದೇವನ್ಕೋಟೆ, ಕಾರ್ಕಳ, ತಮಿಳುನಾಡಿನ ಮಹಾಬಲಿಪುರಂ , ರಾಜಸ್ಥಾನ ಹಾಗೂ ನೇಪಾಳಗಳಿಂದ ಶಿಲೆಗಳನ್ನು ತರಲಾಗಿದ್ದು, ಶಿಲ್ಪಿಗಳು ಪರಿಶೀಲನೆ ನಡೆಸಿ ಉತ್ತಮವಾದವುಗಳನ್ನು ಆಯ್ದುಕೊಂಡು ಪ್ರತಿಮೆ ನಿರ್ಮಿಸಲಿದ್ದಾರೆ ಎಂದು ಶ್ರೀಗಳು ತಿಳಿಸಿದರು.
ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್, ವಿಹಿಂಪ ಮುಖಂಡ ಗೋಪಾಲ್, ಶ್ರೀಗಳ ಆಪ್ತ ಕಾರ್ಯದರ್ಶಿ ಕೃಷ್ಣ ಭಟ್ , ಅಯೋಧ್ಯೆ ಪೇಜಾವರ ಮಠದ ವ್ಯವಸ್ಥಾಪಕ ಮಹೇಂದ್ರ ದುಬೆ ಉಪಸ್ಥಿತರಿದ್ದರು.