ಜಿಲ್ಲೆ

ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಜಿಲ್ಲೆಯಲ್ಲೂ ಭದ್ರತೆ ನಿಯೋಜನೆ

Uttara Kannada - Subash Hegde

ಕಾರವಾರ/ಭಟ್ಕಳ: ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ಭದ್ರತೆ ಆಯೋಜಿಸಲಾಗಿದೆ. ಜಿಲ್ಲೆಗೆ ಐದು ಕೆಎಸ್‌ಆರ್‌ಪಿ ತುಕಡಿಗಳನ್ನು ಕರೆಸಿಕೊಳ್ಳಲಾಗಿದೆ. ಕಾರವಾರ, ಶಿರಸಿ, ದಾಂಡೇಲಿ ಹಾಗೂ ಭಟ್ಕಳ ತಾಲೂಕುಗಳಲ್ಲಿ ಸುಮಾರು 25 ಜನರಿರುವ ತುಕಡಿಗಳು ಬೀಡು ಬಿಟ್ಟಿವೆ. ಎಲ್ಲ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.

ಭಟ್ಕಳದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಪೊಲೀಸ್ ಇಲಾಖೆ ಸೂಕ್ಷ್ಮ ಪ್ರದೇಶದಲ್ಲಿ ಹದ್ದಿನ ಕಣ್ಣಿಟ್ಟಿದೆ. ಕಾರವಾರದಿಂದ ಬಾಂಬ್ ನಿಷ್ಕ್ರಿಯ ದಳ ಭಟ್ಕಳಕ್ಕೆ ಆಗಮಿಸಿ ತಪಾಸಣೆ ನಡೆಸುತ್ತಿದೆ.
ಮುರ್ಡೇಶ್ವರ ರೈಲೆ ನಿಲ್ದಾಣ, ದೇವಸ್ಥಾನ, ಪ್ರಮುಖ ಬೀದಿಗಳು, ಭಟ್ಕಳದ ಗ್ರಾಮ ದೇವರಾದ ಶ್ರೀ ಚೆನ್ನಪಟ್ಟಣ ಹನುಮಂತ ದೇವಸ್ಥಾನ, ಮುಖ್ಯ ರಸ್ತೆ, ರೈಲ್ವೆ ನಿಲ್ದಾಣಕ್ಕೆ ತೆರಳಿ ತಪಾಸಣೆ ನಡೆಸಿದೆ. ಪೊಲೀಸ್ ಇಲಾಖೆ ಉಭಯ ಕೋಮಿನ ಮುಖಂಡರನ್ನು ಠಾಣೆಗೆ ಕರೆಯಿಸಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಸಲಹೆ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲೂ ನಿಗಾ ಇಟ್ಟಿರುವ ತಂಡ ಅಶಾಂತಿಯನ್ನು ಹರಡುವ, ಕೋಮು ಭಾವನೆ ಕೆರಳಿಸುವ ಗ್ರೂಫ್‌ಗಳ ಮಾಹಿತಿ ಪಡೆದು ನಿರಂತರ ಸಂಪರ್ಕ ಸಾಧಿಸಿ ಅದರ ಚಟುವಟಿಕೆಗಳನ್ನು ಗಮನಿಸುತ್ತಿದೆ.ಶಿರಸಿಯ ವಿವಿಧ ಕಡೆ ಬಾಂಬ್‌ ಪತ್ತೆ ದಳ ದೇವಸ್ಥಾನಗಳಿಗೆ ತೆರಳಿ ತಪಾಸಣೆ ನಡೆಸಿದೆ.