ಜಿಲ್ಲೆ

ಅಯೋಧ್ಯೆ ಭೂ ಖರೀದಿ ಮಾಹಿತಿ ಶೀಘ್ರ: ಪೇಜಾವರ ಶ್ರೀ ಹೇಳಿಕೆ

ಉಡುಪಿ: ಅಯೋಧ್ಯೆಯಲ್ಲಿ ಭೂ ಖರೀದಿ ಮಾಹಿತಿಯನ್ನು ಶೀಘ್ರ ಬಹಿರಂಗಪಡಿಸುವುದಾಗಿ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಬುಧವಾರ ಅಯೋಧ್ಯೆಗೆ ಭೇಟಿ ನೀಡಿ, ಭೂ ಖರೀದಿ ವ್ಯವಹಾರಗಳ ದಾಖಲೆ ಪರಿಶೀಲಿಸಿದ ಬಳಿಕ ಕಾಮಗಾರಿ ವೀಕ್ಷಿಸಿದರು.

ಬಳಿಕ ‘ವಿಜಯವಾಣಿ’ ಜತೆ ಮಾತನಾಡಿದ ಅವರು ಭೂಮಿ ಖರೀದಿಯಲ್ಲಿ ಅವ್ಯವಹಾರ ಆರೋಪಗಳ ಹಿನ್ನೆಲೆಯಲ್ಲಿ ಈ ಬಗ್ಗೆ ಖುದ್ದು ಪರಿಶೀಲನೆ ನಡೆಸಿ ಮಾಹಿತಿ ಪಡೆಯುವ ಉದ್ದೇಶದಿಂದ ವಿವಿಧ ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗಿದೆ. ಒಂದೆರಡು ದಿನದಲ್ಲಿ ಟ್ರಸ್ಟ್ ವ್ಯವಹಾರದ ಬಗ್ಗೆ ದೇಶದ ಜನತೆಗೆ ಮಾಹಿತಿ ನೀಡಲಾಗುವುದು. ಮಂದಿರ ನಿರ್ಮಾಣ ಪ್ರದೇಶದಲ್ಲಿ ಕಾಮಗಾರಿ ಭರದಿಂದ ಸಾಗುತ್ತಿದ್ದು, ಸೆಪ್ಟೆಂಬರ್ ವೇಳೆಗೆ ನೆಲ ಸಮತಟ್ಟುಗೊಳಿಸುವ ಕಾರ್ಯ ಪೂರ್ಣಗೊಳ್ಳಲಿದೆ. ನಂತರ ದೇವಸ್ಥಾನದ ಪಂಚಾಂಗ ನಿರ್ಮಾಣ ಪ್ರಾರಂಭವಾಗಲಿದೆ ಎಂದರು.

ಟ್ರಸ್ಟ್ ಸದಸ್ಯ ಗೋವಿಂದಗಿರಿ, ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಮಂದಿರ ನಿರ್ಮಾಣ ಉಸ್ತುವಾರಿ ಗೋಪಾಲ್, ಶ್ರೀಗಳ ಅಪ್ತ ಕಾರ್ಯದರ್ಶಿ ಕೃಷ್ಣಮೂರ್ತಿ ಭಟ್, ವಿಷ್ಣು ಭಟ್ ಉಪಸ್ಥಿತರಿದ್ದರು.