ಸುದ್ದಿಗೋಷ್ಠಿಯಲ್ಲಿ ಎಚ್.ಎಸ್.ಸುಂದರೇಶ್ ಮಾತನಾಡಿದರು. ಚಂದ್ರಭೂಪಾಲ, ಚಂದನ್ ಇದ್ದರು. 
ಜಿಲ್ಲೆ

ನಾಳೆ ಆಯನೂರು ಕಾಂಗ್ರೆಸ್ ಸದಸ್ಯತ್ವ ಸ್ವೀಕಾರ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸೇರ್ಪಡೆಯಾಗಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ್ ಹಾಗೂ ಅವರ ಬೆಂಬಲಿಗರು ಆ.28ರಂದು ಜಿಲ್ಲಾ ಕಚೇರಿಯಲ್ಲಿ ಪ್ರಾಥಮಿಕ ಸದಸ್ಯತ್ವ ಸ್ವೀಕರಿಸಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ತಿಳಿಸಿದರು.

ಆ.30ರಂದು ಶಿಕಾರಿಪುರದಲ್ಲಿ ನಾಗರಾಜ ಗೌಡ ಪ್ರಾಥಮಿಕ ಸದಸ್ಯತ್ವ ಸ್ವೀಕರಿಸಲಿದ್ದಾರೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷದಿಂದ ಉಚ್ಚಾಟಿಸಲಾಗಿದ್ದ ಹಲವರು ಪಕ್ಷಕ್ಕೆ ಮರಳುತ್ತಿದ್ದು, ಅವರಿಗೂ ಪ್ರಾಥಮಿಕ ಸದಸ್ಯತ್ವ ನೀಡಲಾಗುತ್ತದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಕಾರಣದಿಂದ ಅನೇಕರನ್ನು ಉಚ್ಚಾಟನೆ ಮಾಡಲಾಗಿತ್ತು. ಈಗ ಕೆಪಿಸಿಸಿ ನಿರ್ದೇಶನದ ಮೇರೆಗೆ ಉಚ್ಚಾಟನೆ ತೆರವು ಮಾಡಲಾಗಿದೆ. ಪಕ್ಷದ ಸಿದ್ಧಾಂತ ಒಪ್ಪಿ ಯಾವುದೇ ಮುಖಂಡರು ಕಾಂಗ್ರೆಸ್‌ಗೆ ಬಂದರೂ ಅವರನ್ನು ಸೇರಿಸಿಕೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ ಎಂದರು.
ಮಾಜಿ ಸಚಿವ ಕುಮಾರ್ ಬಂಗಾರಪ್ಪ ಪಕ್ಷ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷರು, ಆ ಬಗ್ಗೆ ಜಿಲ್ಲಾ ಹಂತದಲ್ಲಿ ಯಾವುದೇ ಮಾಹಿತಿಯಿಲ್ಲ. ಅವರು ಮಾಜಿ ಸಚಿವರು, ಹಿರಿಯ ಶಾಸಕರೆನಿಸಿಕೊಂಡವರು. ಅವರ ಪಕ್ಷ ಸೇರ್ಪಡೆ ಬಗ್ಗೆ ಕೆಪಿಸಿಸಿ ಹಂತದಲ್ಲಿ ನಿರ್ಧಾರವಾಗುತ್ತದೆ ಎಂದು ಹೇಳಿದರು.

ಮುನಿಸು ಶಮನ:ಆಯನೂರು ಮಂಜುನಾಥ್ ಅವರ ಕಾಂಗ್ರೆಸ್ ಸೇರ್ಪಡೆಗೆ ಎಚ್.ಸಿ.ಯೋಗೇಶ್ ಅಸಮಾಧಾನ ವ್ಯಕ್ತಪಡಿಸಿರುವುದು ಸಹಜ. ಅವರ ಎದುರು ಚುನಾವಣೆಯಲ್ಲಿ ಸ್ಪರ್ಧಿಸಿದವರೇ ಈಗ ಪಕ್ಷಕ್ಕೆ ಬಂದಿರುವುದರಿಂದ ಸಹಜವಾಗಿಯೇ ಯೋಗೇಶ್ ಆಕ್ರೋಶ ಹೊರಹಾಕಿದ್ದಾರೆ. ಆದರೆ ಅವರೊಂದಿಗೆ ಮಾತುಕತೆ ನಡೆಸಿ ಮುನಿಸು ಶಮನ ಮಾಡಲಾಗುವುದು. ಎಲ್ಲರೂ ಹೊಂದಿಕೊಂಡು ಹೋಗಬೇಕೆಂದು ಕಾಂಗ್ರೆಸ್ ಮುಖಂಡರೇ ಸೂಚನೆ ನೀಡಿದ್ದಾರೆ. ಹೀಗಾಗಿ ಜಿಲ್ಲಾ ಹಂತದಲ್ಲಿ ಅಸಮಾಧಾನ ಹೊರಹಾಕುವುದು ಸಲ್ಲದು ಎಂದು ಎಚ್.ಎಸ್.ಸುಂದರೇಶ್ ಹೇಳಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಭೂಪಾಲ, ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ.ಪ್ರವೀಣ್‌ಕುಮಾರ್, ಪ್ರಮುಖರಾದ ಚಂದ್ರಶೇಖರ್, ಚಂದನ್, ಮಾರ್ಟಿಸ್, ಮುಜೀಬ್ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.