ನಂದಳಿಕೆ ಸಿರಿ ಜಾತ್ರೆ. ಸಿರಿಜಾತ್ರೆಯ ಪ್ರಯುಕ್ತ ಕ್ಷೇತ್ರದಲ್ಲಿ ಉತ್ಸವ ಬಲಿ ನಡೆಯಿತು.  
ಜಿಲ್ಲೆ

ನಂದಳಿಕೆಯಲ್ಲಿ ಅಯನೋತ್ಸವ ಸಿರಿ ಜಾತ್ರೆ ಮಹೋತ್ಸವ

ಕಾರ್ಕಳ: ಸಕಲ ಸಿರಿ ಕ್ಷೇತ್ರಗಳ ತವರೂರು ಎಂಬ ಇತಿಹಾಸ ಪ್ರಸಿದ್ಧಿ ಪಡೆದ ನಾಲ್ಕುಸ್ಥಾನ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಂದಳಿಕೆ ಅಯನೋತ್ಸವ ಸಿರಿ ಜಾತ್ರೆ ಮಹೋತ್ಸವ ಶನಿವಾರ ನಡೆಯಿತು.

ಶ್ರೀಗಂಧದ ರಜತ ಪಲ್ಲಕ್ಕಿಯಲ್ಲಿ ಶ್ರೀ ಉರಿಬ್ರಹ್ಮ ದೇವರ ಸ್ವರ್ಣ ಪಾದುಕೆ, ಶ್ರೀ ಅಬ್ಬಗ-ದಾರಗರ ಚೆನ್ನೆಮಣೆಗಳ ಸಾಲಂಕೃತ ಮೆರವಣಿಗೆ ನಡೆಯಿತು. ಮಧ್ಯಾಹ್ನ ಆಲಡೆಯಲ್ಲಿ ಅಣ್ಣಪ್ಪ ದರ್ಶನ, ಹಸಿರು ಮಡಲು ಚಪ್ಪರ ಕಟ್ಟೆ ಪೂಜಾ ಸೇವೆ, ಶ್ರೀ ದೇವರ ಮಹೋತ್ಸವ ಬಲಿ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಕ್ಷೇತ್ರಕ್ಕೆ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನವನ್ನು ಪಡೆದು ತಮ್ಮ ತಮ್ಮ ನಾಗ ಕ್ಷೇತ್ರದಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ನಂದಳಿಕೆ ಚಾವಡಿ ಅರಮನೆ ಸುಹಾಸ್ ಹೆಗ್ಡೆ, ಕ್ಷೇತ್ರದ ವ್ಯವಸ್ಥಾಪಕ ಪಿ.ರವಿರಾಜ್ ಭಟ್, ಪ್ರಧಾನ ಅರ್ಚಕ ಹರೀಶ್ ತಂತ್ರಿ ಮತ್ತಿತರರು ಉಪಸ್ಥಿತರಿದ್ದರು.