ಜಿಲ್ಲೆ

ಕಾಯ್ದೆ ತಿದ್ದುಪಡಿಯಿಂದ ಎಪಿಎಂಸಿ ಮುಚ್ಚುವುದಿಲ್ಲ ; ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕೇಶಗೌಡ ಹೇಳಿಕೆ

ಮಾಸ್ತಿ: ಎಪಿಎಂಸಿಗಳನ್ನು ಮುಚ್ಚುವುದಿಲ್ಲ. ಖಾಸಗಿ ಸಂಸ್ಥೆ ಮತ್ತು ವ್ಯಕ್ತಿಗಳು ಎಪಿಎಂಸಿಗೆ ತೆರಳಿ ರೈತರ ಉತ್ಪನ್ನ ಖರೀದಿಸುವ ಅವಕಾಶ ದೊರೆಯಲಿದೆ. ಇದರಿಂದ ಬೆಳೆಗಳಿಗೆ ಸ್ಪರ್ಧಾತ್ಮಕ ಬೆಲೆ ಸಿಗುತ್ತದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕೇಶಗೌಡ ಹೇಳಿದರು.

ಟೇಕಲ್‌ನ ಭೈರತ್ನಹಳ್ಳಿಯಲ್ಲಿ ಬಿಜೆಪಿ ಜಿಲ್ಲಾ ರೈತ ಮೋರ್ಚಾದಿಂದ ಶನಿವಾರ ಹಮ್ಮಿಕೊಂಡಿದ್ದ ರೈತ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.  ಕೃಷಿ ಸುಧಾರಣೆ ಮಾಡಲು ಕೇಂದ್ರ ಸರ್ಕಾರ ಮೂರು ಮಸೂದೆ ಮಂಡಿಸಿದೆ ಎಂದು ಆರೋಪಿಸಲಾಗುತ್ತಿದೆ. ಕೃಷಿ ಸ್ಥಾಯಿ ಸಮಿತಿ 2018-19ರಲ್ಲಿ ವರದಿ ನೀಡಿದೆ. ಅಲ್ಲದೆ 2019ರಲ್ಲಿ ಏಳು ರಾಜ್ಯಗಳ ಮುಖ್ಯಮಂತ್ರಿಗಳ ಉನ್ನತ ಸಮಿತಿ ಕೂಡ ಇದನ್ನೇ ಶಿಾರಸು ಮಾಡಿ ನಂತರ ಮಸೂದೆ ಮಂಡಿಸಲಾಗಿದೆ ಎಂದರು.

ಜಿಲ್ಲಾ ಅಧ್ಯಕ್ಷ ಲಕ್ಷ್ಮಣಗೌಡ ಮಾತನಾಡಿ, ಕೇಂದ್ರ ಸರ್ಕಾರ ಮಂಡಿಸಿರುವ ಮಸೂದೆಗಳಿಗೆ ವಿರೋಧ ಮಾಡುತ್ತಿರುವ ಕಾಂಗ್ರೆಸ್, ಹಿಂದೆ ಆಡಳಿತದಲ್ಲಿದ್ದಾಗಲೂ ಇದೇ ರೀತಿ ಕಾಯ್ದೆ ತರಲು ಮುಂದಾಗಿತ್ತು. ಅಂದಿನ ಪ್ರಧಾನಿ ಮನಮೋಹನ್‌ಸಿಂಗ್ ಎಪಿಎಂಸಿ ಕಾಯ್ದೆ ನಿಬಂಧನೆಗಳಿಗೆ ತಿದ್ದುಪಡಿ ತಂದು ನೇರವಾಗಿ ರೈತರಿಂದ ಖರೀದಿ ಮಾಡುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲೂ ಎಪಿಎಂಸಿ ಕಾಯ್ದೆ ತಿದ್ದುಪಡಿ ತರುವ ಪ್ರಸ್ತಾಪವಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನವ ದೆಹಲಿಯಲ್ಲಿ ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿ ಸುಟ್ಟರು. ಇದನ್ನು ನಾವು ಖಂಡಿಸುತ್ತೇವೆ ಎಂದರು.

ಸಭೆಯಲ್ಲಿ ಅಭಿಯಾನ ಪತ್ರ ಪ್ರದರ್ಶಿಸಲಾಯಿತು. ನವರಾತ್ರಿ ಆರಂಭದ ಅಂಗವಾಗಿ ರಾಸು, ಟ್ರ್ಯಾಕ್ಟರ್, ನೇಗಿಲಿಗೆ ಪೂಜೆ ಸಲ್ಲಿಸಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ತಾಲೂಕು ಅಧ್ಯಕ್ಷ ಬಿ.ವೆಂಕಟರಮಣಪ್ಪ, ಖಜಾಂಚಿ ಎಲ್ಲೇಖರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಣ್ಣ, ನರೇಶ್, ಜಿ.ಉಪಾಧ್ಯಕ್ಷ ಎಚ್.ಎನ್.ರಾಮಕೃಷ್ಣಗೌಡ, ತಾ.ಉಪಾಧ್ಯಕ್ಷ ಸುರೇಶ್, ಗೋಪಾಲಕೃಷ್ಣ, ಎಚ್.ನಾರಾಯಣಸ್ವಾಮಿ, ಪ್ರಸನ್ನ ಕುಮಾರ್‌ಗೌಡ, ಅಶ್ವತ್ಥಗೌಡ ಇತರರು ಇದ್ದರು.