ಚಿಕ್ಕಬಳ್ಳಾಪುರ : ಜಿಲ್ಲಾದ್ಯಂತ ಪೊಲೀಸ್ ಇಲಾಖೆಯು ತೆರೆದ ಮನೆ ಕಾರ್ಯಕ್ರಮದ ಮೂಲಕ ಶಾಲಾ ಮಕ್ಕಳಲ್ಲಿ ಪೊಲೀಸರ ಕಾರ್ಯ ನಿರ್ವಹಣೆ ಬಗ್ಗೆ ಅರಿವು ಮೂಡಿಸುವ, ಸಕಾರಾತ್ಮಕ ಮನೋಭಾವನೆ ಬೆಳೆಸಲು ಮುಂದಾಗಿದೆ.
ಜಿಲ್ಲೆಯ ಗುಡಿಬಂಡೆ ಪಟ್ಟಣದ ಪೊಲೀಸ್ ಠಾಣೆ ಸೇರಿ ವಿವಿಧ ಠಾಣೆಗಳಿಗೆ ಶಾಲಾ ವಿದ್ಯಾರ್ಥಿಗಳು ಬುಧವಾರ ಭೇಟಿ ನೀಡಿ, ಪೊಲೀಸ್ ಠಾಣೆ ಮಹತ್ವ, ಸಿಬ್ಬಂದಿ ಕರ್ತವ್ಯ ನಿರ್ವಹಣೆ, ಕಾನೂನು ನಿಯಮ ಪಾಲನೆ, ಬಂಧೀಖಾನೆ, ಅಪರಾಧ ಪ್ರಕರಣಗಳು ಮತ್ತು ಕಡಿವಾಣ ಹಾಕುವಲ್ಲಿ ಸಾರ್ವಜನಿಕರ ಜವಾಬ್ದಾರಿ ಸೇರಿ ಮಹತ್ವದ ಹಲವು ವಿಚಾರಗಳ ಬಗ್ಗೆ ತಿಳಿದುಕೊಂಡರು.
ಪ್ರಕರಣ ದಾಖಲಿಸುವಿಕೆ, ನಿಸ್ತಂತು ಕೊಠಡಿ ಮೂಲಕ ಮಾಹಿತಿ ರವಾನೆ, ಚಾಳಿ ಬಿದ್ದ ಕಳ್ಳರ ಮೇಲೆ ನಿಗಾ, ಎ್ಐಆರ್ ದಾಖಲಿಸುವಿಕೆ, ಕಳವು ಪ್ರಕರಣ, ರಿವಾಲ್ವರ್, ಬಂದೂಕು ಬಳಕೆ ಬಗ್ಗೆ ವಿದ್ಯಾರ್ಥಿಗಳಿಗೆ ಆಯಾ ಪೊಲೀಸ್ ಠಾಣೆ ಇನ್ ಸ್ಪೆಕ್ಟರ್, ಸಬ್ ಇನ್‌ಸ್ಪೆಕ್ಟರ್‌ಗಳು ಮಾಹಿತಿ ನೀಡುವುದರ ಜತೆಗೆ ಗೊಂದಲ ಬಗೆಹರಿಸಿದರು. ಅನೇಕ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿ, ವಿಚಾರ ತಿಳಿದುಕೊಂಡರು.
ಸಮಾಜದಲ್ಲಿ ಅನ್ಯಾಯ, ಅಕ್ರಮ, ಅಪರಾಧ ಪ್ರಕರಣಗಳ ಬಗ್ಗೆ ಸಾರ್ವಜನಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ದೂರದಾರರ ಬಗೆಗಿನ ವಿಚಾರಗಳನ್ನು ಗೌಪ್ಯವಾಗಿಡಲಾಗುತ್ತದೆ. ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ವರದಕ್ಷಿಣಿ ಕಿರುಕುಳ ಸೇರಿ ಸಾಮಾಜಿಕ ಪಿಡುಗಗಳ ಕಡಿವಾಣಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಇಲಾಖೆಯೊಂದಿಗೆ ಜನರು ಕೈ ಜೋಡಿಸಬೇಕು ಎಂದು ಪೊಲೀಸರು ವಿದ್ಯಾರ್ಥಿಗಳಿಗೆ ತಿಳಿಸಿದರು.
ತೆರೆದ ಮನೆ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯ ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾಲಾ ಮಕ್ಕಳಿಗೆ ಸಮಾಜದಲ್ಲಿ ಪೊಲೀಸ್ ಠಾಣೆ ಮಹತ್ವ, ಕರ್ತವ್ಯ ನಿರ್ವಹಣೆ ಮತ್ತು ಕಾನೂನು ನಿಯಮಗಳ ಪಾಲನೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಿಕ್ಕಬಳ್ಳಾಪುರ