ಮಂಡ್ಯ: ಸರ್ಕಾರಿ ಅಧಿಕಾರಿಗಳು ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಭ್ರಷ್ಟಾಚಾರವನ್ನು ಮಾಡದೆ ಪ್ರಾಮಾಣಿಕವಾಗಿ ಸಾರ್ವಜನಿಕರ ಸೇವೆ ಮಾಡಿ ಎಂದು ಲೋಕಾಯುಕ್ತ ಎಸ್ಪಿ ಸುರೇಶ್‌ಬಾಬು ಕಿವಿಮಾತು ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಜಿಲ್ಲಾ ಲೋಕಾಯುಕ್ತ ಪೊಲೀಸ್ ಘಟಕದಿಂದ ಮಂಗಳವಾರ ಆಯೋಜಿಸಿದ್ದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹದಲ್ಲಿ ಮಾತನಾಡಿದ ಅವರು, ಉಕ್ಕಿನ ಮನುಷ್ಯ ಎಂದು ಬಿರುದು ಪಡೆದಿರುವ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ದೇಶದ ಸಮಗ್ರತೆ ಮತ್ತು ಅಭಿವೃದ್ಧಿಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿ. ಅವರ ಜನ್ಮ ದಿನವಾದ ಅ.31ರಂದು ಜಾಗೃತಿ ಅರಿವು ಸಪ್ತಾಹವನ್ನು ಪ್ರತಿ ವರ್ಷವು ಆಚರಿಸುತ್ತಿದ್ದೇವೆ. ಪ್ರತಿಯೊಬ್ಬರೂ ಎಲ್ಲ ಕ್ಷೇತ್ರದಲ್ಲೂ ಬಹಳ ಜಾಗರೂಕರಾಗಿರುವುದು ಮುಖ್ಯ ಎಂದರು.
ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಕೆಲಸಗಳನ್ನು ನಿರ್ವಹಿಸಲು ಲಂಚಕ್ಕೆ ಬೇಡಿಕೆ/ ಅಕ್ರಮ ಆಸ್ತಿ ಸಂಪಾದನೆ, ಅರ್ಜಿಗಳ ವಿಲೇವಾರಿ ಮಾಡುವಲ್ಲಿ ಅನಗತ್ಯ ವಿಳಂಬ, ಸರ್ಕಾರಿ ಹಣ ದುರುಪಯೋಗ, ಕಳಪೆ ಕಾಮಗಾರಿ ಹಾಗೂ ಇತರೆ ಯಾವುದೇ ರೀತಿಯ ಭ್ರಷ್ಟಾಚಾರ ದೂರುಗಳಿದ್ದಲಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ಮೊ.ಸಂ 9364062522, ಉಪಾಧೀಕ್ಷಕರ ಮೊ.ಸಂ 9364062586, ನಿರೀಕ್ಷಕರ ಮೊ.ಸಂ 9364062707, 9364062708 ಹಾಗೂ 9364062709 ಸಂಖ್ಯೆಯನ್ನು ಸಂಪರ್ಕಿಕಿಸಿ ದೂರು ನೀಡಬಹುದಾಗಿದೆ. ಹೆಸರು ಮತ್ತು ವಿಳಾಸದ ಬಗ್ಗೆ ಗೌಪ್ಯತೆ ಕಾಪಾಡಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಸಾರ್ವಜನಿಕ ಆಡಳಿತ ಪಾರದರ್ಶಕವಾಗಿರಲು ಕೆಲಸದಲ್ಲಿ ಅಧಿಕಾರಿಗಳಿಗೆ ನಿಷ್ಠೆ, ಪ್ರಾಮಾಣಿಕತೆ ಹಾಗೂ ಸಮಯ ಪಾಲನೆ ಮುಖ್ಯ. ಸಾರ್ವಜನಿಕರಿಗೆ ಯಾವುದೇ ಅನಗತ್ಯ ಅಡಚಣೆಗಳು ಉಂಟಾಗದಂತೆ ಸೇವೆ ಮಾಡಿ. ನ.3ರವರೆಗೆ ಸಪ್ತಾಹವನ್ನು ಎಲ್ಲ ಇಲಾಖೆ, ಸಾರ್ವಜನಿಕ ಉದ್ದಿಮೆ, ಸಾರ್ವಜನಿಕ ವಲಯದ ಬ್ಯಾಂಕ್, ನಿಗಮ/ ಮಂಡಳಿ, ಸ್ಥಳೀಯ ಮತ್ತು ಅನುದಾನಿತ ಸಂಸ್ಥೆಯಲ್ಲಿ ಆಚರಿಸುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಸಾರ್ವಜನಿಕ ಆಡಳಿತದ ಎಲ್ಲ ಕ್ಷೇತ್ರದಲ್ಲಿ ಭ್ರಷ್ಟಾಚಾರವನ್ನು ತೊಲಗಿಸಿ ಉತ್ತಮ ಆಡಳಿತಕ್ಕಾಗಿ ಪಾರದರ್ಶಕ ನೀತಿಗಳನ್ನು ರೂಪಿಸಿ ಪರಿಣಾಮಕಾರಿಯಾಗಿ ಅವುಗಳನ್ನು ಜಾರಿಗೊಳಿಸಲು ಮತ್ತು ಇಂದಿನ ವ್ಯವಸ್ಥೆಯನ್ನು ಸುಧಾರಿಸಲು ಸಂಬಂಧಪಟ್ಟವರೆಲ್ಲರನ್ನು ಒಗ್ಗೂಡಿಸಿ ಅರಿವು ಮೂಡಿಸುವುದು ಈ ಸಪ್ತಾಹದ ಉದ್ದೇಶವಾಗಿದೆ ಎಂದರು.
ಜಾಗೃತಿ ಅರಿವು ಕೇವಲ ಅಧಿಕಾರಿಗಳಲ್ಲಿ ಮಾತ್ರವಲ್ಲದೇ ಸಾರ್ವಜನಿಕರಲ್ಲಿಯೂ ಇರಬೇಕು. ಏಕೆಂದರೆ ಕಾನೂನು, ಕಾಯ್ದೆ ಪ್ರಕಾರ ಯಾವುದೇ ಅಧಿಕಾರಿ ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದರೆ ಅವರನ್ನು ಎಚ್ಚರಿಸುವಂತಹ ಕೆಲಸವನ್ನು ಸಾರ್ವಜನಿಕರು ಮಾಡಬೇಕು. ಕಾನೂನಿನ ಇತಿ ಮಿತಿಯಲ್ಲಿ ಎಲ್ಲ ಅಧಿಕಾರಿಗಳು ನಿಮಗೆ ನೀಡಿರುವ ಜವಾಬ್ದಾರಿಗಳನ್ನು ಪಾರದರ್ಶಕವಾಗಿ ನಿರ್ವಹಿಸಬೇಕು ಎಂದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಭುಕುಮಾರ್, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ-2 ಎಸ್.ಇ.ಗಂಗಾಧರಸ್ವಾಮಿ, ಲೋಕಾಯುಕ್ತ ಡಿವೈಎಸ್ಪಿ ಸುನಿಲ್ಕುಮಾರ್, ಇನ್ಸ್‌ಪೆಕ್ಟರ್ ಬ್ಯಾಟರಾಯಗೌಡ ಇತರರಿದ್ದರು. ಇದೇ ವೇಳೆ ಜಿಲ್ಲಾಧಿಕಾರಿ ಡಾ.ಕುಮಾರ ಪ್ರತಿಜ್ಞಾ ವಿಧಿ ಬೋಧಿಸಿದರು.