ವಿಜಯವಾಣಿ ಸುದ್ದಿಜಾಲ ಉಡುಪಿ
ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮ ಉಂಟಾಗಲಿದ್ದು, ಅಂತಹ ಕೆಟ್ಟ ಹವ್ಯಾಸಕ್ಕೆ ಒಳಗಾಗಬಾರದು. ಆರೋಗ್ಯಪೂರ್ಣ ಜೀವನಕ್ಕಾಗಿ ತಂಬಾಕು ನಿಷೇಧಿಸಿ, ತಂಬಾಕು ಮುಕ್ತ ಸಮಾಜ ನಿರ್ಮಿಸಬೇಕು ಎಂದು ಪ್ರಧಾನ ಹಿರಿಯ ನ್ಯಾಯಾಧೀಶ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ಎಂ.ಪುರುಷೋತ್ತಮ ಕರೆ ನೀಡಿದರು.
ಉಡುಪಿಯ ಅಜ್ಜರಕಾಡು ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ನಿಮಿತ್ತ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ತಂಬಾಕಿನ ದುಷ್ಪರಿಣಾಮದ ಕುರಿತು ಯುವ ಸಮುದಾಯಕ್ಕೆ ಜಾಗೃತಿ ಮೂಡಿಸಬೇಕಿದೆ. ತಂಬಾಕು ಸೇವನೆಯಂತಹ ದುಶ್ಚಟಗಳಿಂದ ನಮ್ಮ ಪೀಳಿಗೆಯನ್ನು ರಕ್ಷಿಸುವ ಅಗತ್ಯತೆ ಇದೆ ಎಂದರು.
ಕಾಲೇಜಿನ ಪ್ರಾಧ್ಯಾಪಕಿ ಡಾ.ನಿಕೇತನಾ ಪ್ರತಿಜ್ಞಾ ವಿಧಿ ಬೋಧಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ.ಪಿ. ಗಡಾದ, ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಅಶೋಕಕುಮಾರ್ ಎಚ್., ಕಾಲೇಜಿನ ಪ್ರಾಂಶುಪಾಲ ಭಾಸ್ಕರ್ ಶೆಟ್ಟಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ಕಾರ್ಯಕ್ರಮ ನಿರೂಪಿಸಿದರು.
ಕಾಲೇಜಿನ ಆವರಣದಿಂದ ಪ್ರಾರಂಭಗೊಂಡ ಜಾಥಾವು ಪುರಭವನ ಮೂಲಕ ಕೋರ್ಟ್ ಸರ್ಕಲ್, ಜೋಡುಕಟ್ಟೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ವರೆಗೆ ಸಾಗಿತು.
ಉಡುಪಿ: ವಿಶ್ವ ತಂಬಾಕು ರಹಿತ ದಿನದ ನಿಮಿತ್ತ ಮಣಿಪಾಲದಲ್ಲಿ ಕೆಎಂಸಿಯ ಸಮುದಾಯವೈದ್ಯಕೀಯ ವಿಭಾಗದ ವತಿಯಿಂದ ಶುಕ್ರವಾರ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ತಂಬಾಕು ಸೇವೆನೆಯಿಂದ ಆಗುವ ಅನಾಹುತಗಳ ಕಲಾಕೃತಿಯನ್ನು ಕೆಎಂಸಿಯ ಅಸೋಸಿಯೇಟ್ ಡೀನ್ ಡಾ.ಕೃಷ್ಣಾನಂದ ಪ್ರಭು ಮತ್ತು ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಅಶ್ವಿನಿಕುಮಾರ್ ಅನಾವರಣಗೊಳಿಸಿದರು.
ಡಾ.ಕೃಷ್ಣಾನಂದ ಪ್ರಭು ಮಾತನಾಡಿ, ತಂಬಾಕು ಉದ್ಯಮವು ಯುವಜನತೆಯನ್ನು ಯಾವ ರೀತಿ ತನ್ನ ಆಮಿಷಕ್ಕೆ ಒಳಪಡಿಸುತ್ತಿದೆ ಎನ್ನುವುದನ್ನು ಈ ಕಲಾಕೃತಿ ಭಯಾನಕವಾಗಿ ಬಿಂಬಿಸುತ್ತಿದೆ. ತಂಬಾಕಿನ ಸೇವನೆಯಿಂದ ಬಾಯಿ ಕ್ಯಾನ್ಸರ್, ಅನ್ನನಾಳದ ಕ್ಯಾನ್ಸರ್, ಶ್ವಾಶಕೋಶದ ಕ್ಯಾನ್ಸರ್
ಹೃದಯದ ತೊಂದರೆ ಕಟ್ಟಿಟ್ಟ ಬುತ್ತಿಯಾಗಿದೆ. ತಾಂಬಾಕು ಸೇವನೆಯಿಂದ ಪ್ರತಿವರ್ಷ 8 ಮಿಲಿಯನ್ ಜನರು ಮೃತರಾಗುತ್ತಿದ್ದಾರೆ ಎಂದರು.
ಸಮುದಾಯ ವೈದ್ಯಕಿಯ ವಿಭಾಗದ ಪ್ರಾಧ್ಯಾಪಕ ಡಾ. ಮುರಳೀಧರ್ ಕುಲಕರ್ಣಿ ಅವರು ಕಲಾವಿದ ಶ್ರೀನಾಥ್ ಎಂ. ಮತ್ತು ರವಿ ಹಿರೆಬೆಟ್ಟು ರಚಿಸಿದ ತಂಬಾಕು ಜಾಗೃತಿ ಕಲಾಕೃತಿಯ ಬಗ್ಗೆ ವಿವರಿಸಿದರು.
ಸಮುದಾಯ ವೈದ್ಯಕೀಯ ವಿಭಾಗದ ಡಾ. ವೀಣಾ ಕಾಮತ್, ಡಾ. ಚೈತ್ರಾ ರಾವ್, ಡಾ.ಸ್ನೇಹಾ ಕಾಮತ್, ಡಾ. ಈಶ್ವರಿ, ಡಾ ಯಶ್, ಡಾ ಅಖಿಲಾ, ಡಾ. ಮಂಜುಳಾ, ಡಾ ಅರುಣದಾಸ್, ವಿಭಾಗದ ಬೋಧಕೇತರ ಸಿಬ್ಬಂದಿ, ಸ್ನಾತಕೋತ್ತರ ಹಾಗೂ ಪದವಿಪೂರ್ವ ವೈದ್ಯಕೀಯ ವಿದ್ಯಾರ್ಥಿಗಳು ಇದ್ದರು.