ಮುಧೋಳ ತಾಲೂಕಿನ ರೂಗಿ ಗ್ರಾಮದಲ್ಲಿ ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಕರೆತರುವ ಜಾಗಟೆ-ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ಮುಖ್ಯಶಿಕ್ಷಕ ಚಂದ್ರಶೇಖರ ರೂಗಿ, ಶಿಕ್ಷಕರಾದ ಡಿ.ಎಚ್. ಸಣ್ಣಗೋವಿಂದಪ್ಪಗೋಳ, ಸುನಿತಾ ಭದ್ರನ್ನವರ, ಶ್ರೀದೇವಿ ಪರೀಟ ಇದ್ದರು. 
ಜಿಲ್ಲೆ

ರೂಗಿಯಲ್ಲಿ ಜಾಗಟೆ ಜಾಗೃತಿ ಜಾಥಾ

ದತ್ತಾತ್ರೇಯ ಪಿ ಕುಲಕರ್ಣಿ

ಮುಧೋಳ: ಮಕ್ಕಳ ತಲೆ ಮೇಲೆ ಕಾಗದದ ಟೋಪಿ, ಶಿಕ್ಷಕರು-ಮಕ್ಕಳ ಬಾಯಿಂದ ಶಾಲೆಗೆ ಬನ್ನಿ ಮಕ್ಕಳೆ ಎಂಬ ಉದ್ಘೋಷ, ಮನೆ-ಮನೆಗೆ ತೆರಳಿ ಮಕ್ಕಳನ್ನು ಶಾಲೆಗೆ ಕಳಿಸಿ ಎನ್ನುವ ಕೋರಿಕೆ...

ಹೌದು, ಇದು ಕೇಳಿ ಬಂದಿದ್ದು ತಾಲೂಕಿನ ಪುಟ್ಟ ಗ್ರಾಮ ರೂಗಿಯಲ್ಲಿ. ಶಾಲೆ ಪ್ರಾರಂಭವಾಗಿ ಇಲ್ಲಿಯವರೆಗೆ ವಿದ್ಯಾಮಂದಿರದತ್ತ ಸುಳಿಯದ ವಿದ್ಯಾರ್ಥಿ ಮನೆ ಬಾಗಿಲಿಗೆ ಹೋಗಿ ಶಾಲೆಯ ಘಂಟೆಯನ್ನು ಹೊಡೆದು ಮಗುವಿನ ಪಾಲಕರಿಗೆ ತಿಳಿ ಹೇಳಿ ಆ ಮಗುವನ್ನು ಶಾಲೆಗೆ ಕರೆ ತರುವ ವಿಶಿಷ್ಟ ಯೋಚನೆ -ಯೋಜನೆ ಲ ಕೊಟ್ಟಿದೆ. ಒಂದೇ ದಿನದಲ್ಲಿ 21 ವಿದ್ಯಾರ್ಥಿಗಳು ಶಾಲೆಗೆ ಬಂದಿರುವುದು ಶಿಕ್ಷಕರ ಸಂತಸಕ್ಕೆ ಕಾರಣವಾಗಿದೆ.

ತಾಲೂಕಿನ ರೂಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಾಗಟೆ ಜಾಗೃತಿ ಎಂಬ ವಿಶೇಷ ಪ್ರಭಾತಪೇರಿ ಕಾರ್ಯಕ್ರಮವನ್ನು ಮುಖ್ಯಶಿಕ್ಷಕ ಚಂದ್ರಶೇಖರ ರೂಗಿ ನೇತೃತ್ವದಲ್ಲಿ ಸೋಮವಾರ ಆಯೋಜಿಸಲಾಗಿತ್ತು.

ಶಿಕ್ಷಕರ ಜತೆಗೆ ವಿದ್ಯಾರ್ಥಿಗಳು ವಿಶೇಷ ಚಿಣ್ಣರ ಟೋಪಿ ಧರಿಸಿ, ಶೈಕ್ಷಣಿಕ ಜಾಗೃತಿ ಮೂಡಿಸುವ ನಾಮಲಕ ಹಿಡಿದು, ಘೋಷಣೆ ಕೂಗುತ್ತ ಗ್ರಾಮದಲ್ಲಿ ಪ್ರಭಾತಪೇರಿ ನಡೆಸಿದರು. ಗೈರಾಗುತ್ತಿರುವ ಮಕ್ಕಳ ಮನೆ ಮುಂದೆ ಘಂಟೆ ಬಾರಿಸುವ ಮೂಲಕ ಶಾಲೆಗೆ ಕರೆತರಲು ಪ್ರಯತ್ನ ನಡೆಸಿದರು.

ಶಿಕ್ಷಕರಾದ ಡಿ.ಎಚ್.ಸಣ್ಣಗೋವಿಂದಪ್ಪಗೋಳ, ಸುನಿತಾ ಭದ್ರನವರ, ಶ್ರೀದೇವಿ ಪರೀಟ, ಪದ್ಮಾವತಿ ಬೂದಿ, ವಿವೇಕಾನಂದ ಮೆಟಗುಡ್ಡ ಇದ್ದರು.

ಶಾಲೆಯಲ್ಲಿ ವಿದ್ಯಾರ್ಥಿ ಸಂಖ್ಯೆ ಹೆಚ್ಚಳ ಮಾಡಲು ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಬಿಇಒ, ಗ್ರಾಮಸ್ಥರು ಹಾಗೂ ಎಸ್‌ಡಿಎಂಸಿಯವರು ಸಂಪೂರ್ಣ ಸಹಕಾರ ನೀಡಿದ್ದಾರೆ. ಮಕ್ಕಳ ದಾಖಲಾತಿ 150 ಗಡಿ ದಾಟುವ ಗುರಿ ಹೊಂದಿದ್ದೇವೆ. -ಚಂದ್ರಶೇಖರ ರೂಗಿ , ಮುಖ್ಯಶಿಕ್ಷಕ ಸರ್ಕಾರಿ ಶಾಲೆಯತ್ತ ಸುಳಿಯದ ಮಕ್ಕಳ ಮನೆಗೆ ಭೇಟಿ ನೀಡಿ ಮನವೊಲಿಸಿ ಶಾಲೆಗೆ ಕರೆತರುವ ವಿಶಿಷ್ಟ ಕಾರ್ಯ ಶ್ಲಾಘನೀಯ. ಇದರಿಂದ ಮಕ್ಕಳ ಸಂಖ್ಯೆ ಹೆಚ್ಚಳವಾಗುವ ನಂಬಿಕೆ ಮೂಡಿರುವುದು ಖುಷಿ ತಂದಿದೆ. -ಸಮೀರ ಮುಲ್ಲಾ, ಬಿಇಒ, ಮುಧೋಳ