ಜಿಲ್ಲೆ

ಕನ್ನಡಿಗ ಕಾರ್ಮಿಕರ ಶೋಷಣೆ ವಿರುದ್ಧ ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಜಾಗೃತಿ ಜಾಥಾ

ಮೈಸೂರು: ವಿವಿಧ ಕಾರ್ಖಾನೆಗಳಲ್ಲಿ ಸ್ಥಳೀಯ ಕನ್ನಡಿಗ ಕಾರ್ಮಿಕರಿಗೆ ಆಗುತ್ತಿರುವ ಶೋಷಣೆ ಕುರಿತು ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಸೆ.15ರಿಂದ ನಾಲ್ಕು ದಿನಗಳ ಕಾಲ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಅಧ್ಯಕ್ಷ ಬಿ.ಬಿ.ರಾಜಶೇಖರ್ ತಿಳಿಸಿದರು.

ಸೆ.15ರಿಂದ ಬೆಳಗ್ಗೆ ಜಾಥಾಕ್ಕೆ ಶಾಸಕ ಜಿ.ಟಿ.ದೇವೇಗೌಡ ಚಾಲನೆ ನೀಡಲಿದ್ದಾರೆ. ಜಾಗೃತಿ ಜಾಥಾವೂ ಹೂಟಗಳ್ಳಿ, ಕೂರ್ಗಳ್ಳಿ, ಹೆಬ್ಬಾಳು ಮತ್ತು ಮೇಟಗಳ್ಳಿ ಪ್ರದೇಶಗಳಲ್ಲಿ ನಾಲ್ಕು ದಿನಗಳ ಕಾಲ ನಿರಂತರವಾಗಿ ನಡೆಯಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಖಾನೆಗಳಲ್ಲಿ ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ ಉತ್ತರ ಭಾರತೀಯರಿಗೆ ಕೆಲಸ ನೀಡಲಾಗುತ್ತಿದ್ದು, ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ನೀಡುತ್ತಿಲ್ಲ. ಕಡ್ಡಾಯವಾಗಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು, ನಮ್ಮ ನೆಲ, ಜಲ ಮತ್ತು ಪರಿಸರವನ್ನು ಕಾಪಾಡಬೇಕು ಎಂದು ಆಗ್ರಹಿಸಲಾಗುವುದು ಎಂದರು.

ದಿನಗೂಲಿ ನೌಕರರಿಗೆ ಕನಿಷ್ಠ ವೇತನ ನೀಡಬೇಕು, ಅವಧಿಗಿಂತ ಹೆಚ್ಚು ದುಡಿಸಿಕೊಳ್ಳುವುದನ್ನು ನಿಲ್ಲಿಸಬೇಕು, ಕ್ಯಾಂಟೀನ್‌ನಲ್ಲಿ ಗುಣಮಟ್ಟದ ಊಟ, ತಿಂಡಿ ನೀಡಬೇಕು, ಕಡಿತ ಮಾಡಿಕೊಳ್ಳುವ ಇಎಸ್‌ಐ, ಪಿಎಫ್ ವಂತಿಗೆಗೆ ಕಾರ್ಖಾನೆ ಪಾಲು ಸೇರಿಸಿ ಸಂಬಂಧಪಟ್ಟ ಇಲಾಖೆಗೆ ಹಣ ಜಮೆ ಮಾಡಬೇಕು, ಆರೋಗ್ಯ ಸೌಲಭ್ಯ ನೀಡಬೇಕು, ಕಾರ್ಮಿಕರಿಗೆ ಉದ್ಯೋಗ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು.

ಮೊದಲ ದಿನ ಸೆ.15ರಂದು ಹೂಟಗಳ್ಳಿ, ಸೆ.16ರಂದು ಕೂರ್ಗಳ್ಳಿ, ಸೆ.17ರಂದು ಹೆಬ್ಬಾಳು ಮತ್ತು ಸೆ.18ರಂದು ಮೇಟಗಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ಜಾಗೃತಿ ಜಾಥಾ ನಡೆಸಿ ಕಾರ್ಖಾನೆಗಳ ಮುಖ್ಯಸ್ಥರಿಗೆ ಸರ್ಕಾರದ ಕಾನೂನು ಮತ್ತು ಕಟ್ಟಳೆ ಕಡ್ಡಾಯವಾಗಿ ಪಾಲಿಸುವಂತೆ, ಕಾರ್ಮಿಕರಿಗೆ ವೇತನ ತಾರತಮ್ಯ ಮತ್ತು ಊಟೋಪಚಾರದಲ್ಲಿ ನಡೆಯುತ್ತಿರುವ ತಾರತಮ್ಯವನ್ನು ತಪ್ಪಿಸಬೇಕು ಎಂಬ ಇತ್ಯಾದಿ ವಿಚಾರವಾಗಿ ತಿಳಿಸಿಕೊಡಲಾಗುವುದು ಎಂದು ಮಾಹಿತಿ ನೀಡಿದರು.

ವೇದಿಕೆಯ ಪರಮೇಶ್, ನಂಜುಂಡ, ಸಂತೋಷ್, ಮಂಜುಳಾ, ಸಿಂಧುವಳ್ಳಿ ಶಿವಕುಮಾರ್, ಮನುಗೌಡ, ಸೋಮಶೇಖರ, ಗೌತಮ್, ಅನುರಾಜ್‌ಗೌಡ, ಮಂಜುನಾಥ್, ಸಿದ್ದೇಗೌಡ ಇತರರು ಇದ್ದರು.