ಜಾಗೃತಿ ಜಾಥಾ 
ಜಿಲ್ಲೆ

ರಸ್ತೆ ಸುರಕ್ಷತಾ ನಿಯಮ ಪಾಲಿಸಿ, ಜೀವ ಉಳಿಸಿ

ಶಿವರಾಜ.ಎಂ

ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಅಮರೇಶ್‌ಗೌಡ ಸಲಹೆ

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ನಗರದಲ್ಲಿ ನಗರ ಠಾಣೆ ಪೊಲೀಸ್ ಇಲಾಖೆ, ಶ್ರೀಸೂರ್ಯ ಪಿಯು ಕಾಲೇಜು, ಶ್ರೀರಾಮ ನಸಿರ್ಂಗ್ ಕಾಲೇಜು, ಎಚ್‌ಇಎಚ್‌ಎಸ್ ಇನ್‌ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಕಾಲೇಜ್ ಸಹಯೋಗದೊಂದಿಗೆ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಜಾಗೃತಿ ಜಾಥಾ ಇತ್ತೀಚೆಗೆ ನಡೆಯಿತು.
ನಗರದ ನೆಲದಾಂಜನೇಯಸ್ವಾಮಿ ದೇವಾಲಯದ ಮುಂಭಾಗದಿಂದ ಹೊರಟ ಜಾಥಾದಲ್ಲಿ ಭಿತ್ತಿಪತ್ರ ಹಿಡಿದ ವಿದ್ಯಾರ್ಥಿಗಳು ರಸ್ತೆ ಸುರಕ್ಷತೆ, ವಾಹನ ಚಾಲನೆ ಹಾಗೂ ರಸ್ತೆ ಸುರಕ್ಷತಾ ಘೋಷಣೆ ಕೂಗುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.
ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಅಮರೇಶ್‌ಗೌಡ ಮಾತನಾಡಿ, ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಲಿದಿದ್ದರೆ ಅಪಘಾತಗಳು ನಡೆಯುವುದು ಸಹಜ. 18 ವರ್ಷಕ್ಕಿಂತ ಮೊದಲೇ ಪರವಾನಗಿ ಇಲ್ಲದೇ ವಾಹನಗಳನ್ನು ಚಲಾಯಿಸುವುದು ಅಪರಾಧವಾಗಲಿದೆ. ರಸ್ತೆ ಸುರಕ್ಷತೆಯ ಬಗ್ಗೆ ನಿಯಮ ಅರಿತು ಪಾಲಿಸುವುದು ಒಳ್ಳೆಯದು ಎಂದು ಹೇಳಿದರು.
ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಇದರಿಂದ ತಲೆಗೆ ಪೆಟ್ಟಾಗಿ ಮರಣ ಹೊಂದುವುದನ್ನು ತಡೆಯಬಹುದು. ವಾಹನ ಚಾಲನೆಯ ಪರವಾನಗಿ, ವಿಮೆ ಮತ್ತಿತರೆ ಅಗತ್ಯ ದಾಖಲೆಗಳನ್ನು ಹೊಂದಿರಬೇಕು. ವ್ಹೀಲಿಂಗ್, ಸ್ಟಂಟ್ ಮಾಡಲು ಹೋಗಿ ಜೀವ ಕಳೆದುಕೊಳ್ಳುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಈ ಬಗ್ಗೆ ಪಾಲಕರು ತಮ್ಮ ಮಕ್ಕಳ ವಾಹನಗಳ ಚಾಲನೆ ಕಡೆಗೆ ಗಮನ ನೀಡಬೇಕು ಎಂದರು.
ಸುಜ್ಞಾನ ದೀಪಿಕಾ ಸಂಸ್ಥೆಯ ಮುಖ್ಯಸ್ಥ ಎಂ.ಎಸ್.ಮಂಜುನಾಥ್ ಮಾತನಾಡಿ, ಹೆಲ್ಮೆಟ್ ಧರಿಸಿದರೆ ಕೂದಲಿನ ಸೌಂದರ್ಯ ಹಾಳಾಗುತ್ತದೆ ಎನ್ನುವ ಮನೋಭಾವನೆಯಿಂದ ಹೊರಬರಬೇಕು. ಹೆಲ್ಮೆಟ್ ಧರಿಸಿದರೆ ಶೇ.42 ಪ್ರಮಾಣದಲ್ಲಿ ಸಾವು ತಪ್ಪಿಸಬಹುದು. ನಮ್ಮ ಹಾಗೂ ಇತರರ ಸುರಕ್ಷತೆಗೆ ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.