ಜಿಲ್ಲೆ

ಮಾದಕ ವ್ಯಸನದಿಂದ ಮಾನಸಿಕ ಆರೋಗ್ಯ ಕ್ಷೀಣ : ಉಪನಿರೀಕ್ಷಕಿ ಪ್ರತಿಭಾ ಹೇಳಿಕೆ

ಸೌಮ್ಯ ಆರ್

ಮೂಡುಬಿದಿರೆ: ಮಾದಕ ದ್ರವ್ಯಗಳ ವ್ಯಸನಕ್ಕೆ ಹೆಚ್ಚಾಗಿ ಯುವಜನರು ಬಲಿಯಾಗುತ್ತಿದ್ದಾರೆ. ಅವುಗಳ ಸೇವನೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಕ್ಷೀಣಿಸುತ್ತದೆ. ಇದರಿಂದ ಕೇವಲ ಸೇವಿಸುವವನಿಗೆ ಮಾತ್ರವಲ್ಲ, ಸಮಾಜಕ್ಕೂ ತೊಂದರೆಯಾಗುತ್ತಿದೆ. ಸಮಾಜದಲ್ಲಿ ನಡೆಯುವ ಅಪರಾಧ ಕೃತ್ಯಗಳಾದ ಕಳ್ಳತನ, ಕೊಲೆ, ಅತ್ಯಾಚಾರ ಇತ್ಯಾದಿಗಳಿಗೆ ತೊಡಗಿರುವ ಶೇ.70 ಆರೋಪಿಗಳು ಮಾದಕ ದ್ರವ್ಯಗಳ ವ್ಯಸನಕ್ಕೆ ಒಳಗಾಗಿರುತ್ತಾರೆ ಎಂದು ಮೂಡುಬಿದಿರೆ ಪೊಲೀಸ್ ಠಾಣಾ ಉಪನಿರೀಕ್ಷಕಿ ಪ್ರತಿಭಾ ಹೇಳಿದರು.

ಆಳ್ವಾಸ್ ಹೋಮಿಯೋಪತಿ ಕಾಲೇಜು ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ಮತ್ತು ಅಕ್ರಮ ಸಾಗಾಟ ತಡೆ ದಿನದಂದು ಆಳ್ವಾಸ್ ಪುನರ್ಜನ್ಮ ಸಮಗ್ರ ವೈದ್ಯಕೀಯ ಚಿಕಿತ್ಸೆ ದುಶ್ಚಟ ನಿವಾರಣಾ ಕೇಂದ್ರದ ವತಿಯಿಂದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಳ್ವಾಸ್ ಪುನರ್ಜನ್ಮ ವೈದ್ಯಕೀಯ ನಿರ್ದೇಶಕ ಡಾ.ವಿನಯ್ ಆಳ್ವ ಅಧ್ಯಕ್ಷತೆ ವಹಿಸಿದರು. ಬೆಳ್ತಂಗಡಿ ಜನ ಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಆಳ್ವಾಸ್ ಹೋಮಿಯೋಪತಿ ಕಾಲೇಜಿನ ಪ್ರಾಂಶುಪಾಲ ಡಾ.ರೋಶನ್ ಪಿಂಟೋ ಉಪಸ್ಥಿತರಿದ್ದರು.

ಆಳ್ವಾಸ್ ಪುರ್ನಜನ್ಮದ ಆಪ್ತಸಮಾಲೋಚಕಿ ಸುಮನ್ ಪಿಂಟೋ ಸ್ವಾಗತಿಸಿದರು. ಬೆನ್ಸನ್ ಡಿಸೋಜ ವಂದಿಸಿದರು. ಮುಖ್ಯ ಆಪ್ತಸಮಾಲೋಚಕ ಲೋಹಿತ್ ಬಂಟ್ವಾಳ ನಿರೂಪಿಸಿದರು.