ಜಿಲ್ಲೆ

ಮಾದಕ ವ್ಯಸನಕ್ಕೆ ಯುವಜನತೆ ಬಲಿ

ಮನೋವೈದ್ಯ ಡಾ. ಪಿ.ವಿ. ಭಂಡಾರಿ ಕಳವಳ

ತೆಂಕನಿಡಿಯೂರು ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮ

ವಿಜಯವಾಣಿ ಸುದ್ದಿಜಾಲ ಉಡುಪಿ

ದೇಶದ ಭವಿಷ್ಯ ರೂಪಿಸಬೇಕಿದ್ದ ಯುವಜನತೆಯೇ ಇತ್ತೀಚೆಗೆ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವುದು ಕಳವಳಕಾರಿ. ವಿದ್ಯಾರ್ಥಿಗಳಾದ ತಾವು ಮೊದಲು ಈ ವಿಚಾರವಾಗಿ ಎಚ್ಚೆತ್ತುಕೊಂಡು ಸಮಾಜ ಜಾಗೃತಗೊಳಿಸಬೇಕಾಗಿದೆ. ಈ ಕಾರ್ಯದಲ್ಲಿ ಶೈಕ್ಷಣಿಕ, ಸರ್ಕಾರೇತರ ಸಂಸ್ಥೆ ಹಾಗೂ ನಾಗರಿಕ ಸಮಾಜವೂ ಕೈಜೋಡಿಸಬೇಕು ಎಂದು ಉಡುಪಿಯ ಬಾಳಿಗಾ ಆಸ್ಪತ್ರೆಯ ಮನೋವೈದ್ಯ ಡಾ. ಪಿ.ವಿ. ಭಂಡಾರಿ ಸಲಹೆ ನೀಡಿದರು.

ಉಡುಪಿಯ ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಐಕ್ಯುಎಸಿ, ಮಾದಕ ವ್ಯಸನ ತಡೆ ಸಮಿತಿ, ಯುವ ರೆಡ್​ಕ್ರಾಸ್​ ಘಟಕ ಹಾಗೂ ಲಯನ್ಸ್​ ಉಡುಪಿ ಅಮೃತ್​ ಡಿಸ್ಟ್ರಿಕ್ಟ್​ 317ಸಿ ಆಶ್ರಯದಲ್ಲಿ ಆಯೋಜಿಸಿದ್ದ ಮಾದಕ ವ್ಯಸನ ದುಷ್ಪರಿಣಾಮಗಳ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವ್ಕರ್​ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್​ ಅಮೃತ್​ ಉಡುಪಿಯ ಅಧ್ಯಕ್ಷ ಲ.ಗೋಪಾಲ ಅಂಚನ್​, ಐಕ್ಯುಎಸಿ ಸಂಚಾಲಕ ಡಾ. ವಿಷ್ಣುಮೂರ್ತಿ ಪ್ರಭು, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಾಜಕುಮಾರ್​, ಗ್ರಂಥಪಾಲಕ ಕೃಷ್ಣ ಸಾಸ್ತಾನ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ಯಾವುದೆಲ್ಲ ಮಾದಕ ವಸ್ತುಗಳು, ಅದರಿಂದಾಗುವ ದುಷ್ಪರಿಣಾಮ, ಕಾನೂನಿನಲ್ಲಿರುವ ಶಿಕ್ಷೆ ಮತ್ತು ವ್ಯಸನದಿಂದ ಮುಕ್ತರಾಗುವ ಮಾರ್ಗೋಪಾಯಗಳ ಕುರಿತಾಗಿ ಮಾಹಿತಿ ನೀಡಲಾಯಿತು.

ಮಾದಕ ವ್ಯಸನ ತಡೆ ಸಮಿತಿಯ ಸಂಚಾಲಕ ಡಾ.ರೋಷನ್​ ಕುಮಾರ್​ ಶೆಟ್ಟಿ ಸ್ವಾಗತಿಸಿದರು. ಸಂಖ್ಯಾಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಉಮೇಶ ಪೈ ವಂದಿಸಿದರು. ಯುವ ರೆಡ್​ಕ್ರಾಸ್​ ಸಂಚಾಲಕ ಪ್ರಶಾಂತ ನೀಲಾವರ ಕಾರ್ಯಕ್ರಮ ನಿರೂಪಿಸಿದರು.

ಆರಂಭದಲ್ಲಿ ಒತ್ತಡ, ಆತಂಕ, ನಿರಾಶೆ, ಏಕತಾನತೆ ಮತ್ತು ಮನೋರಂಜನೆಗಾಗಿ ಆರಂಭವಾಗುವ ಮಾದಕ ವ್ಯಸನ ಕ್ರಮೇಣ ದುಶ್ಚಟವಾಗುತ್ತದೆ. ಅದು ವ್ಯಕ್ತಿಯ ಘನತೆ, ಸಾಮಾಜಿಕ ಸ್ಥಾನಮಾನ, ಕೌಟುಂಬಿಕ ಸಂಬಂಧ, ಉದ್ಯೋಗಕ್ಕೆ ತೊಡಕುಂಟಾಗಿ ಕೊನೆಗೆ ಜೀವವನ್ನೇ ಬಲಿಪಡೆದು ಕೌಟುಂಬಿಕ ಅಶಾಂತಿ ಸೃಷ್ಟಿಸುತ್ತದೆ. | ಡಾ. ಪಿ.ವಿ. ಭಂಡಾರಿ. ಮನೋವೈದ್ಯ, ಉಡುಪಿ