ಜಿಲ್ಲೆ

ನ್ಯಾಯದಾನ ಪವಿತ್ರ ಅವಕಾಶ: ಉಪಲೋಕಾಯುಕ್ತ ಫಣೀಂದ್ರ

ಉಡುಪಿ: ನ್ಯಾಯಾಂಗ ಭಾರತ ಸಂವಿಧಾನದ ಅತ್ಯಂತ ಉತಷ್ಟ ವ್ಯವಸ್ಥೆ. ನ್ಯಾಯಾಂಗ ಸರಿಯಾಗಿ ಕಾರ್ಯ ನಿರ್ವಹಿಸದಿದ್ದಲ್ಲಿ ಸಮಾಜದ ಆರೋಗ್ಯ ಹದಗೆಡುತ್ತದೆ. ಹೀಗಾಗಿ ನ್ಯಾಯದಾನ ಎನ್ನುವುದು ದೇವರು ಮಾಡುವಂತಹ ಕಾರ್ಯ. ಆದರೆ, ಎಲ್ಲೆಡೆ ಬಂದು ನ್ಯಾಯ ಕೊಡಲು ತನಗೂ ಸಾಧ್ಯ ಇಲ್ಲ ಎಂದು ದೇವರು ನ್ಯಾಯಾಧೀಶರನ್ನು ಸೃಷ್ಟಿಸಿದ್ದಾನೆ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್​. ಫಣೀಂದ್ರ ಅಭಿಪ್ರಾಯಪಟ್ಟರು.

ಉಡುಪಿಯ ಜಿಲ್ಲಾ ನ್ಯಾಯಾಲಯದ ಕಾನ್ಫರೆನ್ಸ್​ ಹಾಲ್​ನಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಕರ್ನಾಟಕ ಲೋಕಾಯುಕ್ತ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಭಾನುವಾರ ಆಯೋಜಿಸಿದ್ದ ಉತ್ತಮ ಸಾರ್ವಜನಿಕ ಆಡಳಿತದಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆ ಮತ್ತು ಕಾನೂನು ಸೇವೆಗಳ ಪಾತ್ರ ಕುರಿತ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯೋಜನೆ ಅಗತ್ಯ:
ಬೆಳಗ್ಗೆ 10 ಗಂಟೆಗೆ ನ್ಯಾಯಾಲಯಕ್ಕೆ ಅಗಮಿಸಿ, 11 ಗಂಟೆಗೆ ಒಂದಿಷ್ಟು ಕೇಸ್​ ಪರಿಶೀಲಿಸಿ, ಸಂಜೆ 5 ಗಂಟೆಗೆ ಮನೆಗೆ ಹೋಗುವುದು ನ್ಯಾಯಾಧೀಶನ ಕೆಲಸ ಆಗಿರಬಾರದು. ಇದು ಮೆಕಾನಿಕಲ್​ ಜಾಬ್​ ಅಲ್ಲ. ನ್ಯಾಯ ಬಯಸಿ ಬರುವ ಪ್ರತಿ ಕದಾರನ ಸಮಸ್ಯೆ ಕುರಿತು ಪರಾಮರ್ಶಿಸಿ, ಎಲ್ಲಿ ನ್ಯಾಯ ಇದೆ ಎನ್ನುವುದನ್ನು ಕಂಡುಹಿಡಿಯಬೇಕು. ಇದು ಸುಲಭವಾದ ಕೆಲಸ ಅಲ್ಲ. ಅತ್ಯಂತ ಪ್ರಾಮಾಣಿಕ ಹಾಗೂ ಶ್ರದ್ಧೆ, ನಿಷ್ಠೆಯಿಂದ ಈ ಕೆಲಸ ಮಾಡಿದರೆ ಮಾತ್ರ ಸರಿಯಾಗಿ ನ್ಯಾಯದಾನ ಮಾಡಲು ಸಾಧ್ಯವಾಗುತ್ತದೆ. ಹೀಗಾಗಿ ನ್ಯಾಯಾಧೀಶ ಅಗತ್ಯ ಯೋಜನೆ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಅಧ್ಯಕ್ಷತೆ ವಹಿಸಿದ್ದರು. ಲೋಕಾಯುಕ್ತ ವಿಚಾರಣೆಗಳ ಉಪನಿಬಂಧಕ ರಂಗೇಗೌಡ, ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್​ ಪಿ.ಎಂ. ಪಾಟೀಲ್​, ಲೋಕಾಯುಕ್ತ ಮಂಗಳೂರು ವಿಭಾಗದ ಅಧೀಕ್ಷಕ ಸಿ.ಎ. ಸೈಮನ್​ ಉಪಸ್ಥಿತರಿದ್ದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶೆ ಶರ್ಮಿಳಾ ಕಾರ್ಯಕ್ರಮ ನಿರೂಪಿಸಿದರು.