raichur  
ಜಿಲ್ಲೆ

ಡೆಂಗೆ ನಿಯಂತ್ರಣ ಕುರಿತು ಅರಿವು ಕಾರ್ಯಕ್ರಮ

Raichur - Reporter - Rachhai Swamy

ರಾಯಚೂರು ಮನೆಯೊಳಗೆ, ಹೊರಗೆ ಸ್ವಚ್ಛತೆ ಕಾಪಾಡಿಕೊಳ್ಳಿ, ಕೈಗಳನ್ನು ಸೋಪಿನಿಂದ ತೊಳೆದು ಶುಚಿಯಾಗಿಟ್ಟುಕೊಳ್ಳಬೇಕು. ನಿಮ್ಮ ಆರೋಗ್ಯ ಚೆನ್ನಾಗಿದ್ದರೆ, ಸುತ್ತಮುತ್ತಲಿನ ಆರೋಗ್ಯವೂ ಉತ್ತಮವಾಗಿರುತ್ತದೆಂದು ಡಿಎಚ್‌ಓ ಡಾ.ಸುರೇಂದ್ರ ಬಾಬು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಡೆಂಗೆ ರೋಗ ಹರಡುವ ವಿಧಾನ ಹಾಗೂ ಅದರಿಂದಾಗುವ ಅಪಾಯದ ಬಗ್ಗೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯದಲ್ಲಿ ದಿನೇದಿನೆ ಕೋವಿಡ್-19ರ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಕುರಿತು ವಿದ್ಯಾರ್ಥಿಗಳ ಬಗ್ಗೆ ಶಿಕ್ಷಕರು ಹೆಚ್ಚಿನ ಕಾಳಜಿ ವಹಿಸಬೇಕು. ರಸ್ತೆ, ಸಾರ್ವಜನಿಕ ಪ್ರದೇಶ ಅಥವಾ ಜನರು ವಾಸಿಸುವ ಪ್ರದೇಶಗಳಲ್ಲಿ ತ್ಯಾಜ್ಯವನ್ನು ಎಸೆಯಬಾರದು. ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.

ವರ್ಷದ ಜೂನ್ ತಿಂಗಳನಿಂದ ಅಕ್ಟೋಬರ್ ತಿಂಗಳಲ್ಲಿ ಈಡಿಸ್ ಸೊಳ್ಳೆಗಳು ಉಲ್ಬಣಗೊಳ್ಳುತ್ತದೆ. ಈ ಈಡಿಸ್ ಸೊಳ್ಳೆಗಳು ಹಗಲು ಹೊತ್ತು ಕಚ್ಚುತ್ತವೆ. ಈ ಸೊಳ್ಳೆಯಿಂದ ಡೆಂಗಿ, ಚಿಕೂನ್ ಗುನ್ಯಾ, ಝೀಕಾ, ಹಳದಿ ಜ್ವರ ಹರಡುತ್ತದೆ. ಅನಾಫಿಲಿಸ್ ಸೊಳ್ಳೆಗಳು ರಾತ್ರಿ ಸಮಯದಲ್ಲಿ ಕಚ್ಚುತ್ತವೆ. ಈ ಸೊಳ್ಳೆಯಿಂದ ಮಲೇರಿಯಾ ಹರಡುತ್ತದೆ. ಕ್ಯೂಲೆಕ್ಸ್ ಸೊಳ್ಳೆ ಮುಂಜಾನೆ ಹಾಗೂ ಮುಸ್ಸಂಜೆಯ ಸಮಯದಲ್ಲಿ ಕಚ್ಚುತ್ತವೆ. ಇವುಗಳಿಂದ ಜ್ವರ ಹರಡುತ್ತದೆ ಎಂದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಚಂದ್ರಶೇಖಯ್ಯ ಸ್ವಾಮಿ ಮಾತನಾಡಿ, ಶಿಕ್ಷಣ ಸಂಸ್ಥೆಗಳಲ್ಲಿನ ಅಡುಗೆ ಕೋಣೆಗಳು, ಶುಚಿಗೊಳಿಸುವ ಉದ್ದೇಶಗಳಿಗಾಗಿ ವಿವಿಧ ಚಟುವಟಿಕೆಗಳಿಗಾಗಿ ಬಳಸುವ ಪಾತ್ರೆಗಳು, ಸಿಮೆಂಟ್ ಟ್ಯಾಂಕಗಳು, ಓವರ್ ಹೆಡ್ ಟ್ಯಾಂಕಗಳನ್ನು ಕಾಲಕಾಲಕ್ಕೆ ಶುಚಿಗೊಳಿಸಬೇಕು ಎಂದು ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶ್ರೀನಿವಾಸ, ಹಿರಿಯ ಆರೋಗ್ಯ ನಿರೀಕ್ಷಕ ಮಾನಪ್ಪ, ಜಿಲ್ಲಾ ಆರೋಗ್ಯ ಮತ್ತು ಶಿಕ್ಷಣ ಉಪ ಅಧಿಕಾರಿ ಬಸಯ್ಯ, ತಾಲೂಕು ಆರೋಗ್ಯ ಮತ್ತು ಶಿಕ್ಷಣಾಧಿಕಾರಿ ಸರೋಜಾ, ಎಂಟಿಎಸ್ ಸಂಧ್ಯಾ ನಾಯಕ, ಕಸ್ತೂರಿ, ರಾಧಿಕಾ, ಅನಿತಾ, ಆರೋಗ್ಯ ಅಧಿಕಾರಿ ಅರಣ್, ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿ ಅನ್ನಪೂರ್ಣ ಸೇರಿದಂತೆ ಆಶಾ ಕಾರ್ಯಕರ್ತೆಯರು ಹಾಗೂ ವಿದ್ಯಾರ್ಥಿಗಳು ಇದ್ದರು.