ವಿಜಯವಾಣಿ ಸುದ್ದಿಜಾಲ ಧಾರವಾಡ
ಸಮಾನ ಮನಸ್ಕರ ವೇದಿಕೆ, ರೈತ, ಕಾಮಿರ್ಕ, ದಲಿತ ಕನ್ನಡಪರ, ಪ್ರಗತಿಪರ, ಬಸವಕೇಂದ್ರ, ಮಹಿಳಾ ಮತ್ತು ಅಲ್ಪಸಂಖ್ಯಾತ ಸಮಾನ ಮನಸ್ಕರ ಸಂಘಟನೆಗಳ ಸಹಯೋಗದಲ್ಲಿ ಸಂವಿಧಾನ ಸಂರಕ್ಷಿಸೋಣ, ಜಾಗೃತರಾಗಿ ಮತದಾನ ಮಾಡೋಣ ಎಂಬ ವಿಶೇಷ ಕಾರ್ಯಕ್ರವನ್ನು ಮೇ 1ರಂದು ಸಂಜೆ 5.30ಕ್ಕೆ ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಲಾಗಿದೆ ಎಂದು ಚಿಂತಕ ರಮಜಾನ್ ದರ್ಗಾ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಜನರಿಂದ ಆಯ್ಕೆಯಾಗುವ ರಾಜಕಾರಣಿಗಳು ತಾವು ಜನರ ಸೇವಕರು ಎಂಬುದನ್ನು ಮರೆತು ಅಧಿಕಾರದ ಅಮಲಿನಲ್ಲಿ ದುಡಿಯುವ ಮಧ್ಯಮ ವರ್ಗದ ಸಂಪತ್ತು ಲೂಟಿ ಮಾಡಿ ಭ್ರಷ್ಟಚಾರದಲ್ಲಿ ಮುಳುಗಿದ್ದಾರೆ. ದ್ವೇಷ ರಾಜಕಾರಣ ತೊಲಗಿಸಿ, ಪ್ರೀತಿಯ ಬಂಧುತ್ವ ಸೌಹಾರ್ದದ ಬಾಳು ನಡೆಸಲು ಸಂವಿಧಾನ ಅಗತ್ಯ. ಇಂತಹ ಸಂವಿಧಾನದ ತಿದ್ದುಪಡಿ, ಬದಲಿಸುವ ಬಗ್ಗೆ ಕೆಲ ರಾಜಕೀಯ ಪಕ್ಷಗಳು ಹೇಳುತ್ತಿವೆ. ಅದನ್ನು ವಿರೋಧಿಸಲು ಜನರಲ್ಲಿ ಜಾಗೃತಿ ಮೂಡಿಸಲು ಸಮಾನ ಮನಸ್ಕರ ವೇದಿಕೆ ವತಿಯಿಂದ ಚಾಮರಾಜನಗರದಿಂದ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಮೇ 1ರಂದು ಧಾರವಾಡದಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಶ್ರೀ ದಿಂಗಾಲೇಶ್ವರ ಸ್ವಾಮೀಜಿ, ಶ್ರೀ ನಿಜಗುಣಾನಂದ ಸ್ವಾಮೀಜಿ, ಚಿಂತಕರಾದ ಸದಾಶಿವ ರ್ಮಜಿ, ಮಲ್ಲಿಕಾ ಘಂಟಿ ಸೇರಿ ನಾಡಿನ ಪ್ರಗತಿಪರ ಚಿಂತಕರು ಭಾಗವಹಿಸಲಿದ್ದಾರೆ. ಈ ವೇಳೆ ಸಂವಿಧಾನ ರಕ್ಷಣೆ ಮಾಡಲು ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಸಂವಿಧಾನ ವಿರೋಧಿಸುವ ರಾಜಕೀಯ ಪಕ್ಷಗಳಿಗೆ ಮತ ಹಾಕದಂತೆ ಮನವಿ ಮಾಡಲಾಗುವುದು ಎಂದರು.
ಮಲ್ಲಿಕಾ ಘಂಟಿ, ಶಂಕರ ಹಲಗತ್ತಿ, ಜಗನ್ ಸಿ.ಕೆ. ಇತರರು ಇದ್ದರು.