ಜಿಲ್ಲೆ

ಮಾದ್ರೆಯಲ್ಲಿ ಜಾಗೃತಿ ಕಾರ್ಯಕ್ರಮ

ಆದರ್ಶ್. ಎಂ.ಕೆ.

ಮಡಿಕೇರಿ: ಡಾ.ಬಿ.ಆರ್.ಅಂಬೇಡ್ಕರ್ ಅವರ ೬೮ನೇ ಪರಿನಿರ್ವಾಣದ ಅಂಗವಾಗಿ ಮಾನವ ಬಂಧುತ್ವ ವೇದಿಕೆ ಕೊಡಗು ಜಿಲ್ಲಾ ಶಾಖೆ ವತಿಯಿಂದ ಶನಿವಾರಸಂತೆಯ ಮಾದ್ರೆ ಗ್ರಾಮದ ಸಾರ್ವಜನಿಕ ಸ್ಮಶಾನದಲ್ಲಿ ಮೌಢ್ಯ ಮುಕ್ತ ಸಮಾಜಕ್ಕಾಗಿ ಪರಿವರ್ತನಾ ದಿನಾಚರಣೆಯನ್ನು ಇತ್ತೀಚೆಗೆ ಆಚರಿಸಲಾಯಿತು.

ಮಾದ್ರೆ ಗ್ರಾಮದ ಸ್ಮಶಾನ ಜಾಗದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಜೆ.ಎಲ್.ಜನಾರ್ಧನ್, ಮಾನವ ಬಂಧುತ್ವ ವೇದಿಕೆಯು ಕರ್ನಾಟಕದಲ್ಲಿ ವೈಚಾರಿಕ ಕ್ರಾಂತಿಯನ್ನು ಎಲ್ಲರಲ್ಲಿ ಮೂಡಿಸುತ್ತಿದೆ. ಅಜ್ಞಾನದಿಂದ ವಿಜ್ಞಾನದ ಕಡೆಗೆ ಹಾಗೂ ಮೂಢನಂಬಿಕೆ, ಕಂದಾಚಾರಗಳನ್ನು ಹೋಗಲಾಡಿಸುವ ಸಲುವಾಗಿ ರಾಜ್ಯಾದ್ಯಂತ ಕಾರ್ಯಕ್ರಮ ನಡೆಯುತ್ತಿದೆ ಎಂದರು.

ಜನಪ್ರತಿನಿಧಿ ಸತೀಶ್ ಜಾರಕಿಹೊಳಿ ಅವರು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ ವೈಚಾರಿಕ ಕ್ರಾಂತಿಯನ್ನೇ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೊಡಗು ಮಾನವ ಬಂಧುತ್ವ ವೇದಿಕೆಯಿಂದಲೂ ಮಾದ್ರೆ ಗ್ರಾಮದ ಸ್ಮಶಾನ ಜಾಗದಲ್ಲಿ ಅಡುಗೆ ಮಾಡಿ ಊಟ ಮಾಡುವ ಮೂಲಕ ಮೌಢ್ಯಾಚರಣೆಯಿಂದ ಎಲ್ಲರೂ ಹೊರ ಬರಬೇಕೆಂದು ಕರೆ ನೀಡುತ್ತಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ವೇದಿಕೆಯ ತಾಲೂಕು ಸಂಚಾಲಕ ಎಂ.ಎಸ್.ವೀರೇಂದ್ರ, ಗ್ರಾಮದ ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಎಂ.ಕೆ.ಮಂಜುನಾಥ, ಸದಸ್ಯರುಗಳಾದ ಪಿ.ಎಂ.ವಿಶ್ವ, ಅರುಣ್ ಕುಮಾರ್, ಡೀಲಾಕ್ಷ, ಗುರುಪ್ರಸಾದ್ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.