ಜಿಲ್ಲೆ

ದೌರ್ಜನ್ಯಕ್ಕೊಳಗಾದರೆ ಹೆದರದೆ ದೂರು ನೀಡಿ

ಅನುರಾಧಾ ಹಾದಿಮನಿ ಕರೆ

ಮಹಿಳೆಯರಿಗೆ ಅರಿವು-ಜಾಗೃತಿ ಕಾರ್ಯಕ್ರಮ

ವಿಜಯವಾಣಿ ಸುದ್ದಿಜಾಲ ಉಡುಪಿ

ಮಹಿಳೆಯರ ಹಕ್ಕು ರಕ್ಷಣೆ ಹಾಗೂ ಸಬಲೀಕರಣಕ್ಕಾಗಿ ಸರ್ಕಾರದ ಅನೇಕ ಯೋಜನೆಗಳಿವೆ. ಸಮಾಜದಲ್ಲಿ ದೌರ್ಜನ್ಯ ಅಥವಾ ಅನ್ಯಾಯಕ್ಕೆ ತುತ್ತಾದರೆ ಹೆದರದೆ ಗ್ರಾಪಂ, ಸಖಿ ಕೇಂದ್ರ ಮತ್ತು ವಿವಿಧ ರಕ್ಷಣಾ ಘಟಕಗಳಿಗೆ ಮಾಹಿತಿ ನೀಡಬೇಕು. ಗರ್ಭಿಣಿಯರು ಪೌಷ್ಠಿಕ ಆಹಾರ ಸೇವಿಸಿ ಸ್ವಯಂ ಹಾಗೂ ಮಗುವಿನ ಆರೋಗ್ಯ ರಕ್ಷಣೆಗೆ ಕಾಳಜಿ ವಹಿಸಬೇಕು ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರೂಪಣಾ ಅಧಿಕಾರಿ ಅನುರಾಧಾ ಹಾದಿಮನಿ ಕರೆ ನೀಡಿದರು.

ಉಡುಪಿಯ 80 ಬಡಗಬೆಟ್ಟು ಗ್ರಾಪಂನ ಸಭಾಭವನದಲ್ಲಿ ಆಯೋಜಿಸಿದ್ದ ಮಹಿಳಾ ಮತ್ತು ಹೆಣ್ಣು ಮಕ್ಕಳ ಸ್ನೇಹಿ ಗ್ರಾಪಂ ಕಾರ್ಯಕ್ರಮದಡಿ ಪೋಷಣ್​ ಅಭಿಯಾನ, ಗರ್ಭಿಣಿಯರ ಸೀಮಂತ, ಆರೋಗ್ಯ ಮಾಹಿತಿ ಹಾಗೂ ಬ್ಯಾಂಕಿಂಗ್​ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮವನ್ನು ಗರ್ಭಿಣಿ ಹಾಗೂ ಪುಟಾಣಿ ಮಗುವಿನ ಮೂಲಕ ದೀಪ ಬೆಳಗಿಸಿ ಉದ್ಘಾಟಿಸಲಾಯಿತು. ಗ್ರಾಪಂ ಅಧ್ಯಕ್ಷ ಕೇಶವ ಕೋಟ್ಯಾನ್​ ಅಧ್ಯಕ್ಷತೆ ವಹಿಸಿದ್ದರು.

ಮಹಿಳೆಯರಿಗೆ ವಿವಿಧ ಮಾಹಿತಿ

ಉಡುಪಿ ತಾಲೂಕು ಸಿಡಿಪಿಒ ವಿಜಯಾ ನಾರಾಯಣ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾಂತಿ ಪ್ರಭು, ಮುನಿಯಾಲು ಆಯುರ್ವೇದ ಕಾಲೇಜಿನ ಉಪನ್ಯಾಸಕಿ ನಿವೇದಿತಾ ಹೆಬ್ಬಾರ, ದಕ್ಷಿಣ ಕನ್ನಡ ಕೇಂದ್ರ ಸಹಕಾರ ಬ್ಯಾಂಕ್​ನ ಎಜಿಎಂ ಕರುಣಾಕರ ಇತರರು ಮಾಹಿತಿ ನೀಡಿದರು. ಮಹಿಳಾ ಸಬಲೀಕರಣದ ಕುರಿತಾಗಿ ದೀಪಾ, ಪಿಎಂ ಹರ್​ ಘರ್​ ಬಿಜಿಲಿ ಕುರಿತು ಸೋಲಾರ್​ ಸಂಸ್ಥೆಯ ಲಿಂಗಯ್ಯ ಮಾಹಿತಿ ನೀಡಿದರು.

ಆಯ್ದ ಗರ್ಭಿಣಿಯರಿಗೆ ಸೀಮಂತ ಮಾಡಲಾಯಿತು. ಪುಟಾಣಿಗಳಿಗೆ ಅನ್ನ ಪ್ರಾಷನ, ಅಪೌಷ್ಠಿಕ ಮಕ್ಕಳಿಗೆ ಪ್ರೋಟಿನ್​ ಪೌಡರ್​ ವಿತರಿಸಲಾಯಿತು. ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.

ಬ್ಯಾಂಕ್​ನ ಅಧಿಕಾರಿ ಮುರಳೀಧರ ಭಟ್​, ದಾನಿ ದಿನೇಶ ಪುತ್ರನ್​, ಗ್ರಾಪಂ ಉಪಾಧ್ಯಕ್ಷೆ ರೂಪಾ ನಾಯಕ, ಪಿಡಿಒ ಅಶೋಕಕುಮಾರ್​, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಮಾಲತಿ ನಾಯ್ಕ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶೋಭಾ ಶೆಟ್ಟಿ, ಆರೋಗ್ಯ ಸಹಾಯಕಿ ಹರಿಣಾಕ್ಷಿ, ಗ್ರಾಪಂ ಸದಸ್ಯರು, ಗ್ರಾಮ ಹಾಗೂ ಹಿರೇಬೆಟ್ಟು ಒಕ್ಕೂಟದ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಗ್ರಾಪಂ ಕಾರ್ಯದರ್ಶಿ ಶಕುಂತಲಾ ಶೆಟ್ಟಿ, ದ.ಕ. ಕೇಂದ್ರ ಸಹಕಾರ ಬ್ಯಾಂಕ್​ನ ರೇಖಾ ಕಾರ್ಯಕ್ರಮ ನಿರ್ವಹಿಸಿದರು.