oplus_262144 
ಜಿಲ್ಲೆ

ಉತ್ಪಾದನಾ ವೆಚ್ಚ ಹೆಚ್ಚಳ, ಆದಾಯ ಕೊರತೆಯಿಂದ ರೈತರ ಆತ್ಮಹತ್ಯೆ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಬೆಳೆ ಉತ್ಪಾದನಾ ವೆಚ್ಚದಲ್ಲಿನ ಹೆಚ್ಚಳ ಮತ್ತು ಆದಾಯದಲ್ಲಿನ ಕೊರತೆಯಿಂದಾಗಿ ರೈತರು ಸಾಲದ ಶೂಲದಲ್ಲಿ ಸಿಲುಕಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ವಾಲ್ಮಿ ಸಂಸ್ಥೆಯ ಮಾಜಿ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ ಹೇಳಿದರು.

ನಗರದ ಕೆಲಗೇರಿಯ ಇಲ್ಮುದ್ದೀನ್ ಮೊರಬ ಅವರ ಹೊಲದಲ್ಲಿ ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರದಿ0ದ ಶನಿವಾರ ಆಯೋಜಿಸಿದ್ದ ಬೀಜೋಪಚಾರ ಆಂದೋಲನ, ಸುರಕ್ಷಿತ ಕೀಟನಾಶಕ ಬಳಕೆ ಹಾಗೂ ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್‌ನಡಿ ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೈತರ ಆತ್ಮಹತ್ಯೆ ಕುರಿತು ಲಘುವಾಗಿ ಮಾತನಾಡುವ ಪ್ರವೃತ್ತಿ ಕಂಡುಬರುತ್ತಿದೆ. ರೈತರ ಆತ್ಮಹತ್ಯೆ ಪರಿಸ್ಥಿತಿ ಸೃಷ್ಟಿಯಾಗಿರುವುದು ದೇಶಕ್ಕೆ ಅವಮಾನದ ವಿಷಯ. ಕೃಷಿ ಉದ್ಯಮ ಸಾಕಷ್ಟು ಬೆಳವಣಿಗೆ ಕಂಡಿದೆ. ಆದರೆ, ರೈತ ಕುಟುಂಬಗಳ ಸುಸ್ಥಿರ ಬೆಳವಣಿಗೆ ಇದುವರೆಗೂ ಸಾಧ್ಯವಾಗಿಲ್ಲ. ರೈತರ ಬದುಕಿನ ಪರಿಸ್ಥಿತಿ ಬಗ್ಗೆ ಚಿಂತನೆ ಆಗಬೇಕಿದೆ. ರೈತರು ಸಂಘಟಿತರಾಗಿ ಸ್ವಾವಲಂಬಿ, ಲಾಭದಾಯಕ ಕೃಷಿ ಕೈಗೊಳ್ಳುವತ್ತ ದೃಢ ನಿರ್ಧಾರ ಮಾಡಬೇಕು. ಇಲ್ಲದಿದ್ದರೆ ಕೃಷಿ ಬಿಟ್ಟು ನಗರಗಳಿಗೆ ವಲಸೆ ಹೋಗಿ ಕಾರ್ಮಿಕರಾಗಿ ದುಡಿಯುವ ಪರಿಸ್ಥಿತಿ ಬರಲಿದೆ ಎಂದರು.

ಹಸಿರು ಕ್ರಾಂತಿಯ ಪರಿಣಾಮ ಕೃಷಿಯಲ್ಲಿ ರಾಸಾಯನಿಕಗಳ ಬಳಕೆ ಶುರುವಾಯಿತು. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡ ಬಹುರಾಷ್ಟ್ರೀಯ ಕಂಪನಿಗಳು ರಾಸಾಯನಿಕಗಳ ಬಳಕೆಗೆ ಉತ್ತೇಜನ ನೀಡಿದವು. ಇದರಿಂದಾಗಿ ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಹೊಡೆತ ಬಿದ್ದಿದೆ. ರಾಸಾಯನಿಕಗಳ ಮಿತಿಮೀರಿದ ಬಳಕೆಯಿಂದ ಗಂಭೀರ ಕಾಯಲೆಗಳು ಬರುತ್ತಿವೆ. ತಿಪ್ಪೆ ಗೊಬ್ಬರ, ಬೇವಿನ ಹಿಂಡಿ, ಸೆಣಬು ಬೆಳೆದು ಹಸಿರೆಲೆ ಗೊಬ್ಬರ ಮಣ್ಣಿಗೆ ಸೇರಿಸುವ ಸಾಂಪ್ರದಾಯಿಕ ಪದ್ಧತಿಗೆ ಮರಳಬೇಕು ಎಂದರು.

ಆಲೂಸ್ ಮಾವು ಬೆಳೆಯಲು ಧಾರವಾಡ ವಾತಾವರಣ ಉತ್ಕೃಷ್ಟವಾಗಿದೆ. ಇಲ್ಲಿನ ಮಾವಿನ ಹಣ್ಣಿಗೆ ಜಗತ್ತಿನಾದ್ಯಂತ ಬೇಡಿಕೆ ಇದ್ದರೂ ನಷ್ಟದಿಂದಾಗಿ ಗಿಡ ಕಡಿಯುತ್ತಿರುವುದು ದುರದೃಷ್ಟಕರ ಎಂದರು.

ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಮಲ್ಲನಗೌಡ ಪಾಟೀಲ ಮಾತನಾಡಿ, ಕೃಷಿ, ತೋಟಗಾರಿಕೆ, ಪಶು ಸಂಗೋಪನೆಗೆ ಸಂಬ0ಧಿತ ವಿಶ್ವವಿದ್ಯಾಲಯಗಳನ್ನು ಒಂದೇ ವಿವಿಯಡಿ ತರುವ ಕುರಿತು ಸರ್ಕಾರ ಚಿಂತನೆ ಮಾಡಿದ್ದು, ಅಧ್ಯಯನ ನಡೆಯುತ್ತಿದೆ ಎಂದರು.

ಮಾವು ಬೆಳೆಗಾರರ ಬಳಗದ ಅಧ್ಯಕ್ಷ ಸುಭಾಸ ಆಕಳವಾಡಿ, ಪ್ರಗತಿಪರ ರೈತ ಬಸವರಾಜ ಗರಗ, ಕೃಷಿ ವಿವಿ ವಿಜ್ಞಾನಿ ಡಾ. ಗೀತಾ ಟಿ. ಮಾತನಾಡಿದರು. ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ತಮ್ಮಣ್ಣ ಗುಂಡಗೋವಿ, ಸಹಾಯಕ ಕೃಷಿ ನಿದೇರ್ಶಕ ರಾಜಶೇಖರ ಅನಗೌಡg ಹಾಗೂ ರೈತರಿದ್ದರು. ಕೃಷಿ ಅಽಕಾರಿ ಮಹದೇವ ಸರಶೆಟ್ಟಿ ನಿರೂಪಿಸಿದರು. ಬಿಟಿಎಂ ಶಿವಕುಮಾರ ವಂದಿಸಿದರು.