ಎಚ್.ಡಿ.ಕೋಟೆ: ಮಕ್ಕಳ ಜಾಗೃತಿ ಸಂಸ್ಥೆಯ ಕಾರ್ಯಕ್ರಮಗಳು ಪ್ರಾಥಮಿಕ ಶಾಲಾ ಶಿಕ್ಷಣಕ್ಕೆ ಉತ್ತಮ ಅಡಿಪಾಯವನ್ನು ನೀಡುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾ ಅಧಿಕಾರಿ ಮಂಜುನಾಥ್ ಹೇಳಿದರು.
ಪಟ್ಟಣದ ಹೌಸಿಂಗ್ ಬೋರ್ಡ್ ಕಾಲನಿಯ ಮಕ್ಕಳ ಜಾಗೃತಿ ಸಂಸ್ಥೆಯ ಹಿಂದಿನ ವರ್ಷದ ಅವಲೋಕನ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.
ಸಂಸ್ಥೆಯ ಕಾರ್ಯಕ್ರಮದಿಂದ ಶಿಕ್ಷಣ ವಂಚಿತ ಗಿರಿಜನ ಮತ್ತು ಬಡ ಮಕ್ಕಳಿಗೆ ಸಹಾಯಕವಾಗುತ್ತಿದೆ. ಈ ಕಾರ್ಯಕ್ರಮವನ್ನು ಹೀಗೆ ಮುಂದುವರೆಸಿದರೆ ಕಾನ್ವೆಂಟ್‌ಗೆ ಹೋಗುವ ಎಲ್‌ಕೆಜಿ, ಯುಕೆಜಿಗೆ ತೆರಳುವ ಮಕ್ಕಳು ಅಂಗನವಾಡಿಗಳತ್ತ ಮುಖ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ದೀಪಾ ಮಾತನಾಡಿ, ಮಕ್ಕಳ ಜಾಗೃತಿ ಸಂಸ್ಥೆ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದ್ದು, ಅಂಗನವಾಡಿ ಕೇಂದ್ರಗಳಲ್ಲಿ ಗುಣಾತ್ಮಕ ಶಾಲಾ ಪೂರ್ವ ಶಿಕ್ಷಣವನ್ನು ನೀಡುತ್ತಿದೆ. ಈ ಸಂಸ್ಥೆಯಿಂದ 408 ಅಂಗನವಾಡಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಗಿದೆ. ಅಂಗನವಾಡಿ ಶಿಕ್ಷಕಿಯರಿಗೆ ಮತ್ತು ಸಹಾಯಕಿಯರಿಗೆ ತರಬೇತಿ ನೀಡಿದೆ. ಈ ಸಂಸ್ಥೆಗೆ ನಮ್ಮ ಸಹಕಾರ ಹೀಗೆ ಸದಾ ಇರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಿಕ್ಷಣ ಇಲಾಖೆಯ ಬಿಆರ್‌ಸಿ ಕೃಷ್ಣಯ್ಯ, ತಾಲೂಕು ಆರೋಗ್ಯ ನಿರೀಕ್ಷಕ ನಾಗೇಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ರಜಿತಾ, ಇಂದೂಶ್ರೀ, ಎಸ್‌ವಿವೈಎಂ ಸಂಸ್ಥೆಯ ಸಂಯೋಜಕ ಸದಾಶಿವ ಮತ್ತು ಮಕ್ಕಳ ಜಾಗೃತಿ ಸಂಸ್ಥೆಯ ವ್ಯವಸ್ಥಾಪಕಿ ಎಂ.ಆರ್ ದಿವ್ಯಾ, ಉಪ ವ್ಯವಸ್ಥಾಪಕ ನವೀನ್‌ಕುಮಾರ್, ಸಂಯೋಜಕರಾದ ಜಯಶಂಕರ್, ರಂಗಸ್ವಾಮಿ, ಬಾಲಕೃಷ್ಣ, ಮೂಗೂರಯ್ಯ, ಪುನೀತ್, ಪ್ರಕಾಶ್, ಸಹನಾ, ವಿದ್ಯಾ, ಗೀತಾ, ಜವರ ನಾಯಕ, ರಂಗಪ್ಪ, ಸಚಿನ್, ಸಿದ್ದರಾಜು ಇದ್ದರು.