ಮಂಡ್ಯ: ಬ್ಯಾಂಕ್ ಆ್ ಬರೋಡಾ 118ನೇ ವರ್ಷದ ಸಂಸ್ಥಾಪನ ದಿನ ಅಂಗವಾಗಿ ಸಾಮಾಜಿಕ ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದು ತಂಗಳಗೆರೆ ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಗುರುಮೂರ್ತಿ ಹೇಳಿದರು.
ತಾಲೂಕಿನ ತಂಗಳಗೆರೆ ಮುರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಹಾಗೂ ಸಸಿ ನೆಡುವ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ, ರಕ್ತದಾನ ಶಿಬಿರ ಹಾಗೂ ನಿರುದ್ಯೋಗ ಯುವಕ ಯುವತಿಯರಿಗೆ ಉಚಿತ ತರಬೇತಿ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುತ್ತಿರುವುದು ಉತ್ತಮ ಕೆಲಸ ಎಂದರು.
ಕಾರ್ಯಕ್ರಮದ ಉದ್ಘಾಟಿಸಿದ ಬ್ಯಾಂಕ್ ಆ್ ಬರೋಡಾದ ಪ್ರಾದೇಶಿಕ ವ್ಯವಸ್ಥಾಪಕ ಡಾ.ನವೀನ್‌ಕುಮಾರ್ ಮಾತನಾಡಿ, ಸರ್ಕಾರಿ ವಸತಿ ಶಾಲೆಗಳಲ್ಲಿ ಓದುವ ಮಕ್ಕಳಿಗಾಗಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ. ಅದರಂತೆ ವಿದ್ಯಾರ್ಥಿಗಳಿಗೆ ಗಿಡಗಳನ್ನು ದತ್ತು ನೀಡುವ ಮೂಲಕ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮಾಡಿಸುವುದು ಬ್ಯಾಂಕ್ ಆ್ ಬರೋಡಾದ ಉದ್ದೇಶವಾಗಿದೆ. ಪರಿಸರ ಉಳಿಸಿದರೆ ಮಾತ್ರ ಮನುಕುಲ ಉಳಿಯುತ್ತದೆ. ಹಾಗಾಗಿ ಪರಿಸರ ಸಂರಕ್ಷಣೆಗಾಗಿ ನಾವೆಲ್ಲರೂ ಕೈಜೋಡಿಸೋಣ ಎಂದರು.
ಬ್ಯಾಂಕ್ ಆ್ ಬರೋಡಾದ ಪ್ರಾದೇಶಿಕ ಉಪ ವ್ಯವಸ್ಥಾಪಕ ಸುಹಾಸ್, ಲೀಡ್ ಬ್ಯಾಂಕ್ ಮ್ಯಾನೇಜರ್ ಅರುಣ್‌ಕುಮಾರ್, ತರಬೇತಿ ಸಂಸ್ಥೆಯ ಪ್ರಸನ್ನಕುಮಾರ್, ಬ್ಯಾಂಕ್ ಆ್ ಬರೋಡಾದ ಕೆರಗೋಡು ಶಾಖೆಯ ವಿನೋದ್, ಉಪನ್ಯಾಸಕ ಸಂತೋಷ್ ಇತರರಿದ್ದರು. ಕಾರ್ಯಕ್ರಮದಲ್ಲಿ 118 ಹಣ್ಣಿನ ಸಸಿಗಳನ್ನು ಮಕ್ಕಳಿಗೆ ದತ್ತು ನೀಡುವ ವಿಶೇಷ ಕಾರ್ಯಕ್ರಮದ ಜತೆಗೆ ಶಾಲೆಗಾಗಿ ಕಸದ ಬುಟ್ಟಿ ವಿತರಣೆ, ಪರಿಸರ ಜಾಗೃತಿ ಜಾಥಾ ಹಾಗೂ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.