ಬಳ್ಳಾರಿ : ಹೆಪಟೈಟಿಸ್ ರೋಗವು ಯಕೃತ್ತಿಗೆ ಸಂಬಂಧಿಸಿದ ಕಾಯಿಲೆಯಾಗಿದ್ದು, ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ ವ್ಯಕ್ತಿಯು ಮರಣದ ಅಪಾಯ ಹೆಚ್ಚಿರುತ್ತದೆ. ಆದ್ದರಿಂದ ಸಾಂಕ್ರಮಿಕ ರೋಗದ ಬಗ್ಗೆ ಅರಿವು ಹೊಂದಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜನಾರ್ದನ್ ಹೇಳಿದರು.
ನಗರದ ವಿಮ್ಸ್ನ ವೈದ್ಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಹೆಪಟೈಟಿಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೆಪಟೈಟಿಸ್ ರೋಗವು ಮೊದಲು ಸಾಂಕ್ರಾಮಿಕ ರೋಗವಲ್ಲದಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಹೆಪಟೈಟಿಸ್ ಒಂದು ಸಾಂಕ್ರಾಮಿಕ ರೋಗವೆಂದು ಪರಿಗಣಿಸಲಾಯಿತು. ಅದಕ್ಕೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತವಾದ ಚಿಕಿತ್ಸೆ ಹಾಗೂ ವಾಕ್ಸಿನೇಷನ್ ಇರುವುದರಿಂದ, ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಹೆಪಟೈಟಿಸ್ ಕಾಯಿಲೆಯ ಅರಿವಿನ ಕೊರತೆಯಿಂದಾಗಿ ಪ್ರತಿ ವರ್ಷ ಸಾವಿರಾರು ಜನರು ಬಲಿಯಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವದಾದ್ಯಂತ 360 ಮಿಲಿಯನ್ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ವಿಮ್ಸ್ ನಿರ್ದೇಶಕ ಡಾ.ಗಂಗಾಧರ ಗೌಡ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಡಾ.ಬರೂಚ್ ಬ್ಲಂಬರ್ಗ್ ಅವರು ಹೆಪಟೈಟಿಸ್ ಬಿ ವೈರಸ್‌ನ್ನು ಕಂಡುಹಿಡಿದ ನಂತರ, ಅದರ ರೋಗ ನಿರ್ಣಯದ ಪರೀಕ್ಷೆ ಮತ್ತು ವೈರಸ್ ಚಿಕಿತ್ಸೆಗಾಗಿ ಲಸಿಕೆಯನ್ನು ಅಭಿವೃದ್ಧಿಪಡಿಸಿದರು. ಡಾ.ಬ್ಲಂಬರ್ಗ್ ಅವರ ಆವಿಷ್ಕಾರದ ಗೌರವಾರ್ಥವಾಗಿ ಅವರ ಜನ್ಮದಿನವಾದ ಜುಲೈ 28 ರಂದು ವಿಶ್ವ ಹೆಪಟೈಟಿಸ್ ದಿನವನ್ನಾಗಿ ಆಚರಿಸಲಾಗುತ್ತದೆ. ಮೊದಲ ಬಾರಿಗೆ 2008 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ಹೆಪಟೈಟಿಸ್ ದಿನವನ್ನು ಆಚರಿಸಿತು ಎಂದು ತಿಳಿಸಿದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ.ವಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, 2023ರಲ್ಲಿ ವಿಶ್ವ ಹೆಪಟೈಟಿಸ್ ದಿನದ ಧ್ಯೇಯವಾಕ್ಯ 'ಒಂದು ಜೀವನ, ಒಂದು ಯಕೃತ್ತು' ಆಗಿದ್ದು, ನಮಗೆ ಒಂದೇ ಜೀವನವಿದೆ ಹಾಗೂ ನಮ್ಮ ದೇಹದಲ್ಲಿ ಕೇವಲ ಒಂದು ಯಕೃತ್ತು ಇರುವಂತಹದ್ದು, ಹೆಪಟೈಟಿಸ್ ಎಂಬ ಲಿವರ್ ಸಂಬಂಧಿ ಕಾಯಿಲೆ ಬಗ್ಗೆ ತಿಳಿಸಬೇಕಾಗಿದೆ ಎಂದು ಹೇಳಿದರು.
ಹೊಟ್ಟೆ ನೋವು, ಆಗಾಗ್ಗೆ ಅಜೀರ್ಣ ಮತ್ತು ಅತಿಸಾರ, ಜಾಂಡಿಸ್, ಚರ್ಮ, ಉಗುರುಗಳು ಮತ್ತು ಕಣ್ಣುಗಳು ಹಳದಿಗಟ್ಟುವುದು, ವಾಕರಿಕೆ ಮತ್ತು ವಾಂತಿ, ಹಸಿವಿನ ಕೊರತೆ ಮತ್ತು ನಿರಂತರ ತೂಕ ನಷ್ಟ, ಸತತ ಬಿಡದೆ ಕಾಡುವ ಜ್ವರ, ಆಯಾಸ, ಕೀಲು ನೋವು, ಮೂತ್ರದ ಬಣ್ಣ ಹಳದಿಯಾಗುವುದು ಇವೆಲ್ಲವೂ ಹೆಪಟೈಟಿಸ್ ರೋಗದ ಲಕ್ಷಣಗಳಾಗಿವೆ ಎಂದು ತಿಳಿಸಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಬಸರೆಡ್ಡಿ. ಎನ್, ವಿಮ್ಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಖಾಸಾ ಸೋಮಶೇಖರ್, ವಿಮ್ಸ್ನ ಟಿ.ಬಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸುರೇಶ್ ಸಿ.ಎಂ., ವಿಮ್ಸ್ನ ಟ್ರಾಮಾ ಕೇರ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಿವನಾಯ್ಕ, ವಿಮ್ಸ್ನ ಸಮುದಾಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಬಸವರಾಜ.ಎಸ್, ಡಾ.ಜ್ಞಾನ್ ಅಭಿಲಾಷ್, ಡಾ.ಕೌಶಿಕ್, ಡಾ.ಶುಭಾ ಬಿರಾದಾರ್, ಡಾ.ಅನಿಲ್ ಕುಮಾರ್, ಡಾ.ಅಬ್ದುಲ್ಲಾ, ಡಾ.ಮರಿಯಂಬಿ, ಡಾ.ಪೂರ್ಣಿಮಾ ಕಟ್ಟಿಮನಿ, ಡಾ.ವೀರೇಂದ್ರ ಕುಮಾರ್, ಡಾ.ಮೋಹನಾ ಕುಮಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.