ಜಿಲ್ಲೆ

ಮಾದಕ ವಸ್ತು ದುಷ್ಪರಿಣಾಮದ ಅರಿವು ಅಗತ್ಯ

ರೇಷ್ಮೆ ನಗರ ಡೆಸ್ಕ್

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಚಂದ್ರಯ್ಯ ಹೇಳಿಕೆ

ಕನಕಪುರ : ಯುವ ಶಕ್ತಿ ಮಾದಕ ವಸ್ತುಗಳ ಸೇವನೆಯ ದುಶ್ಚಟಕ್ಕೆ ಬಲಿಯಾಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಚಂದ್ರಯ್ಯ ತಿಳಿಸಿದರು.

ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಆರ್‌ಇಎಸ್ ಸಂಸ್ಥೆಯ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಮಾದಕ ವ್ಯಸನ ವಿರುದ್ಧ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಪಾಲಕರೂ ಜಾಗೃತಿ ವಹಿಸುವುದು ಮುಖ್ಯವಾಗಿದೆ. ಹದಿಹರೆಯದಲ್ಲಿ ಡ್ರಗ್ಸ್ ಸೇವನೆಯಿಂದ ದೈಹಿಕ ಹಾಗೂ ಮಾನಸಿಕವಾಗಿ ಅನೇಕ ಬದಲಾವಣೆ ಆಗುತ್ತವೆ, ಇವು ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂದರು.

ಡಿವೈಎಸ್‌ಪಿ ಕೆ.ಸಿ.ಗಿರಿ ಮಾತನಾಡಿ, ಪಾಲಕರು ಕಷ್ಟ ಕಾರ್ಪಣ್ಯಗಳ ನಡುವೆಯೂ ಮಕ್ಕಳ ಉತ್ತಮ ಭವಿಷ್ಯಕ್ಕೆ ಹಂಬಲಿಸುತ್ತಾರೆ. ಯುವಕರು ಕೆಲವು ಆಕರ್ಷಣೆಗಳಿಗೆ ಬಲಿಯಾಗಿ ಪದವಿ ಪೂರ್ವದಲ್ಲಿಯೇ ವಿದ್ಯಾಭ್ಯಾಸ ತೊರೆದು ಪಾಲಕರ ಕನಸನ್ನು ನುಚ್ಚುನೂರು ಮಾಡುತ್ತಿರುವುದು ಬೇಸರದ ಸಂಗತಿ. 18ರ ಹರಯದ ವಿದ್ಯಾರ್ಥಿಗಳು ಅನೇಕ ವ್ಯಸನಗಳಿಗೆ ಬಲಿಯಾಗುತ್ತಿರುವ ಘಟನೆಗಳು ಜಿಲ್ಲೆಯಲ್ಲಿ ಕಂಡುಬರುತ್ತಿವೆ. ಇದೆಲ್ಲದಕ್ಕೂ ಕಡಿವಾಣ ಹಾಕಿ ವ್ಯಸನಮುಕ್ತರಾಗಿ ಉತ್ತಮ ವಿದ್ಯಾಭ್ಯಾಸ ಮಾಡುವ ಮೂಲಕ ಭವಿಷ್ಯದ ಜತೆಗೆ ಪಾಲಕರ ಕನಸನ್ನು ನನಸಾಗಿಸಬೇಕು ಎಂದು ಕಿವಿಮಾತು ಹೇಳಿದರು.

ಆರ್‌ಇಎಸ್ ಅಧ್ಯಕ್ಷ ಎಚ್.ಕೆ.ಶ್ರೀಕಂಠು ಮಾತನಾಡಿ, ಮಾದಕ ವ್ಯಸನ ಸಾಮಾಜಿಕ ಪಿಡುಗಾಗಿದೆ. ವಿಲಾಸಿ ಜೀವನ ಶೈಲಿಗೆ ಮಾರುಹೋದ ಯುವಜನಾಂಗ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿದ್ದು, ಉತ್ತಮ ವಿದ್ಯಾಭ್ಯಾಸ ಮಾಡಬೇಕೆಂದರು.

ಡಾ. ಕೆ.ಸಿ.ವಿನೋದ್ ಕುಮಾರ್, ಮಾದಕ ವಸ್ತುಗಳ ಸೇವನೆಯಿಂದ ಆಗುವ ಕೆಟ್ಟ ಪರಿಣಾಮಗಳ ಬಗ್ಗೆ ಸುದೀರ್ಘ ಉಪನ್ಯಾಸ ನೀಡಿದರು.

ಸಮಾರಂಭಕ್ಕೂ ಮುನ್ನ ಆರ್‌ಇಎಸ್ ಸಂಸ್ಥೆ ಹಾಗೂ ಇನ್ನಿತರ ಶಾಲಾ ಕಾಲೇಜುಗಳ ಸಹಸ್ರಾರು ವಿದ್ಯಾರ್ಥಿಗಳು ನಗರದ ಮುಖ್ಯ ರಸ್ತೆಗಳಲ್ಲಿ ಮಾದಕ ವ್ಯಸನದ ವಿರುದ್ಧ ಜಾಗೃತಿ ಘೋಷಣೆ ಕೂಗಿ ಜನರನ್ನು ಜಾಗೃತಿಗೊಳಿಸಲಾಯಿತು.

ಬಮುಲ್ ಅಧ್ಯಕ್ಷ ರಾಜ್‌ಕುಮಾರ್, ಇನ್‌ಸ್ಪೆಕ್ಟರ್‌ಗಳಾದ ಮಿಥುನ್‌ಶಿಲ್ಪಿ, ವಿಕಾಸ್, ಸಬ್‌ಇನ್‌ಸ್ಪೆಕ್ಟರ್‌ಗಳಾದ ಮನೋಹರ್, ಉಷಾ, ರತ್ನಮ್ಮ, ಆಡಳಿತ ಮಂಡಳಿ ಕಾರ್ಯದರ್ಶಿ ಪುಟ್ಟಸ್ವಾಮಿ, ಖಜಾಂಚಿ ಮಂಜುನಾಥ್, ಪ್ರಾಂಶುಪಾಲ ಬಾಲಕೃಷ್ಣ, ನಿರ್ದೇಶಕರಾದ ಸೂರ್ಯನಾರಾಯಣ್, ಕೆ.ನಿ.ನಾಗರಾಜು, ಕೃಷಿ ಕಾಲೇಜು ಪ್ರಾಂಶುಪಾಲ ಸಿದ್ದರಾಮೇಗೌಡ, ಆಡಳಿತ ಅಧಿಕಾರಿ ಪುಟ್ಟರಾಜು, ಉದ್ಯಮಿ ಬಿ.ವೆಂಕಟರಮಣಸ್ವಾಮಿ ಸೇರಿ ಉಪಾನ್ಯಾಸಕರು, ಪೋಲೀಸ್ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ಗ್ರಾಮೀಣ ಪ್ರದೇಶಕ್ಕೂ ಮಾದಕ ವಸ್ತು ಕಳ್ಳಸಾಗಣೆ ಆಗುತ್ತಿರುವ ದೂರು ಕೇಳಿ ಬರುತ್ತಿವೆ. ಯುವ ಸಮುದಾಯದ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಡ್ರಗ್ಸ್ ಬಳಕೆಗೆ ಕಡಿವಾಣ ಹಾಕಲು ಜಿಲ್ಲಾ ಪೋಲೀಸರು ಹದ್ದಿನ ಕಣ್ಣಿಡುವ ಅಗತ್ಯವಿದೆ. ಯುವ ಪೀಳಿಗೆಯನ್ನು ಬಲಿತೆಗೆದುಕೊಳ್ಳುತ್ತಿರುವ ಕಳ್ಳಸಾಗಾಣಿಕೆ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕಿದೆ. - ಎಚ್.ಕೆ. ಶ್ರೀಕಂಠು, ಆರ್‌ಇಎಸ್ ಅಧ್ಯಕ್ಷ