ಯಳಂದೂರು ಪಟ್ಟಣದ ಪ್ರವಾಸಿ ಮಂದಿರದ ಬಳಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಬಡಗಲಪುರ ನಾಗರಾಜು ಮಾತನಾಡಿದರು 
ಜಿಲ್ಲೆ

30ಕ್ಕೆ ಕುಂತೂರು ಸಕ್ಕರೆ ಕಾರ್ಖಾನೆ ಬಳಿ ಜಾಗೃತಿ ಸಮಾವೇಶ


ಯಳಂದೂರು: ಕಬ್ಬು ಬೆಳೆಗಾರರಿಗೆ ಆಗುತ್ತಿರುವ ಅನ್ಯಾಯದ ಕುರಿತು ಅರಿವು ಮೂಡಿಸುವ ಸಲುವಾಗಿ ಜು.30 ಕ್ಕೆ ಕುಂತೂರು ಸಕ್ಕರೆ ಕಾರ್ಖಾನೆ ಬಳಿ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಡಗಲಪುರ ನಾಗರಾಜು ಮಾಹಿತಿ ನೀಡಿದರು.

ಈ ಸಂಬಂಧ ಗುರುವಾರ ಪಟ್ಟಣದ ಪ್ರವಾಸಿ ಮಂದಿರದ ಬಳಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆಯವರು ಕಬ್ಬು ಬೆಳೆಗಾರರಿಗೆ ಮೋಸ ಮಾಡುತ್ತಿದ್ದಾರೆ. ಕಬ್ಬಿನ ಬಾಕಿ ಹಣವನ್ನು ಇನ್ನೂ ರೈತರಿಗೆ ಪಾವತಿಸಿಲ್ಲ. ಮೊಲಾಸಿಸ್ ಹಾಗೂ ಎಥನಾಲ್ ಸೇರಿದಂತೆ ಕಬ್ಬಿನ ಉಪ ಉತ್ಪನ್ನಗಳ ಲಾಭವನ್ನೂ ರೈತರಿಗೆ ನೀಡುತ್ತಿಲ್ಲ. ಬೇಕಂತಲೇ ಇದನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದೇವೆ ಎಂದು ಲೆಕ್ಕ ತೋರಿಸಿ ಸರ್ಕಾರಕ್ಕೂ ವಂಚನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕಳೆದ ವರ್ಷ ನಿಗದಿಯಾಗಿದ್ದ ಹೆಚ್ಚುವರಿ ಹಣವನ್ನು ಇನ್ನೂ ಪಾವತಿಸಿಲ್ಲ. ಸರ್ಕಾರದ ಜತೆಗಿನ ದ್ವಿಪಕ್ಷೀಯ ಒಪ್ಪಂದ ಪತ್ರವನ್ನು ಜಾರಿ ಮಾಡದೆ ವಂಚನೆ ಮಾಡಲಾಗುತ್ತಿದೆ. ಸಕ್ಕರೆ ಇಳುವರಿಯನ್ನು ಕಡಿಮೆ ತೋರಿಸಿ ಮೋಸ ಮಾಡಲಾಗುತ್ತಿದೆ. ಕಬ್ಬಿನ ತೂಕದಲ್ಲೂ ವಂಚಿಸಲಾಗುತ್ತಿದೆ ಹಾಗಾಗಿ ಕಾರ್ಖಾನೆ ಮುಂಭಾಗ ತೂಕದ ಯಂತ್ರ ಸ್ಥಾಪನೆ ಮಾಡಬೇಕು. ಕಬ್ಬು ತೂಕ ಮಾಡಿ ಕೂಡಲೇ ರೈತರಿಗೆ ಎಸ್‌ಎಂಎಸ್ ಮೂಲಕ ಮಾಹಿತಿ ನೀಡಬೇಕು. ಕಬ್ಬು ಕಟಾವು ನೆಪದಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವುದನ್ನು ನಿಲ್ಲಿಸಬೇಕು. ವಿದ್ಯುತ್ ಅವಘಡಗಳಿಂದ ಸುಟ್ಟ ಕಬ್ಬಿಗೆ ಶೇ. 25 ರಷ್ಟು ಕಡಿತವನ್ನು ನಿಲ್ಲಿಸಬೇಕು ಹಾಗೂ ಇದಕ್ಕೂ ಎಫ್‌ಆರ್‌ಪಿ ಹಣವನ್ನು ಪೂರ್ತಿಯಾಗಿ ನೀಡಬೇಕು ಎಂದು ಆಗ್ರಹಿಸಿದರು.

ಈ ಬಾರಿ ಕಬ್ಬು ಉತ್ಪಾದನೆ ಕಡಿಮೆ ಇದೆ. ಹಾಗಾಗಿ ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ. ಇತರ ಜಿಲ್ಲೆ ಹಾಗೂ ರಾಜ್ಯಗಳಿಂದ ಕಬ್ಬಿಗೆ ಬೇಡಿಕೆ ಹೆಚ್ಚಿದೆ. ಎಕರೆಗೆ 8 ಸಾವಿರ ರೂ. ಪ್ರೋತ್ಸಾಹಧನ ನೀಡಲು ಮುಂದಾಗುತ್ತಿದ್ದಾರೆ. ಜು.31 ರಂದು ಕಬ್ಬಿನ ಕಾರ್ಖಾನೆಗಳನ್ನು ತೆರೆಯುವಂತೆ ರಾಜ್ಯ ಸರ್ಕಾರ ಆದೇಶ ನೀಡಿದೆ. ನಮ್ಮ ಬೇಡಿಕೆ ಈಡೇರುವ ಭರವಸೆ ದೊರೆಯುವವರೆಗೂ ರೈತರು ಸಮಾಧಾನದಿಂದ ಇರಬೇಕು. ಯಾವುದೇ ಕಾರಣಕ್ಕೂ ಕಬ್ಬು ಕಟಾವು ಮಾಡಬಾರದು ಎಂದ ಅವರು, ಈ ಸಂಬಂಧ ಜಾಗೃತಿ ಮೂಡಿಸುವ ಸಲುವಾಗಿ ಸಂಘದ ವತಿಯಿಂದ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಕಬ್ಬು ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದರು.

ಸಂಘದ ತಾಲೂಕು ಅಧ್ಯಕ್ಷ ಗೌಡಹಳ್ಳಿ ಷಡಕ್ಷರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೆಲ್ಲಹಳ್ಳಿ ಚಂದ್ರಶೇಖರಮೂರ್ತಿ, ಮೂಕಹಳ್ಳಿ ಮಹದೇವಸ್ವಾಮಿ, ಕಿನಕಹಳ್ಳಿ ಬಸವಣ್ಣ, ಉಡಿಗಾಲ ರೇವಣ್ಣ, ಮೂಡ್ಲುಪುರ ಶಿವಮೂರ್ತಿ, ಮೂಕಹಳ್ಳಿ ಶಿವಕುಮಾರ್, ಬಾಲು, ಹೊಂಗನೂರು ದೊರೆಸ್ವಾಮಿ ಬಸವಲಿಂಗಪ್ಪ, ನಾಗರಾಜ್, ದೇವರಾಜ್, ನೀಲಕಂಠಪ್ಪ, ಸಿದ್ದೇಶ್ ಸೇರಿದಂತೆ ಹಲವರು ಇದ್ದರು.