ಜಿಲ್ಲೆ

ಬಿಜೆಪಿ ಲಂಚ ಪಡೆದುದ್ದು ಸಾಬೀತಿಗೂ ಸಿದ್ಧ : ಶಾಸಕ ಅಶೋಕ್‌ಕುಮಾರ್ ರೈ ಸವಾಲು

ಸೌಮ್ಯ ಆರ್

ಪುತ್ತೂರು ಗ್ರಾಮಾಂತರ: ಕೆಲವು ದಿನಗಳ ಹಿಂದೆಯಷ್ಟೇ ಬಿಜೆಪಿಯು ಪ್ರತಿ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸುವ ನೆಪದಲ್ಲಿ ಸುಳ್ಳಿನ ಸುರಿಮಳೆಗಳನ್ನು ಜನರಿಗೆ ಮುಟ್ಟಿಸುವ ಯತ್ನ ಮಾಡಿತ್ತು. ಅವರ ಸುಳ್ಳುಗಳಿಗೆ ಕಾಂಗ್ರೆಸ್ ತಕ್ಕ ಉತ್ತರ ನೀಡಲಿದೆ. ಬಿಜೆಪಿಯ ಸುಳ್ಳುಗಳನ್ನು ಎಳೆಎಳೆಯಾಗಿ ಹೊರಗೆ ಎಳೆಯುತ್ತೇವೆ ಎಂದು ಶಾಸಕ ಅಶೋಕ್‌ಕುಮಾರ್ ರೈ ಎಚ್ಚರಿಕೆ ನೀಡಿದರು.

ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲದಲ್ಲಿ ಸೋಮವಾರ ಆಯೋಜಿಸಿದ್ದ ಬಿಜೆಪಿ ಸುಳ್ಳುಗಳಿಗೆ ಉತ್ತರ- ಜನ ಜಾಗೃತಿ ಸಭೆಯಲ್ಲಿ ಮಾತನಾಡಿ, ಬಿಜೆಪಿ ಶಾಸಕರು ಅಧಿಕಾರದಲ್ಲಿದ್ದಾಗ ಅಕ್ರಮ ಸಕ್ರಮಕ್ಕೆ ಸಂಬಂಧಿಸಿ ತಲಾ ಎಕರೆಗೆ 2 ಲಕ್ಷ ರೂ. ಲಂಚ ಪಡೆದಿರುವುದನ್ನು ಸಾಬೀತುಮಾಡಲು ಸಿದ್ಧರಿದ್ದೇವೆ ಎಂದು ಸವಾಲು ಹಾಕಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ವಲಯ ಕಾಂಗ್ರೆಸ್ ಅಧ್ಯಕ್ಷ ಮೂಸಾನ್, ಮುಖಂಡರಾದ ಕುಂಬ್ರ ದುರ್ಗಾಪ್ರಸಾದ್ ರೈ, ರೈ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಶ್ರೀರಾಂ ಪಕ್ಕಳ ನಿರೂಪಿಸಿದರು.

ಹಿಂದಿನ ಶಾಸಕರು ಆಡಳಿತದಲ್ಲಿದ್ದಾಗ ಬಡವರಿಗೆ ನೀಡಿದ ನಿವೇಶನಗಳ ಮಾಹಿತಿ ಬಿಡುಗಡೆ ಮಾಡಬೇಕು. ನಾನು ಸ್ವಂತ ಭೂಮಿ ಖರೀದಿಸಿ ಅದರಲ್ಲಿ 250 ಮಂದಿ ಬಡವರಿಗೆ ಮನೆ ನಿರ್ಮಿಸಿಕೊಡುತ್ತೇನೆ. ಅಶೋಕ್‌ಕುಮಾರ್ ರೈ ಶಾಸಕ