ಜಿಲ್ಲೆ

ಚಿರತೆ ಭೀತಿಯಿಂದ ಪಡ್ರೆ, ವಾಣಿನಗರ ಜನ ಜೀವನ ಸ್ತಬ್ಧ : ಜಾಗೃತಿ ಸಭೆಯಲ್ಲಿ ಆತಂಕ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಕೊಳತ್ತೂರಿನಿಂದ ಸೆರೆಹಿಡಿದ ಚಿರತೆಯನ್ನು ಎಣ್ಮಕಜೆ-ಬೆಳ್ಳೂರು ಗ್ರಾಪಂ ಗಡಿ ಪ್ರದೇಶದಲ್ಲಿ ಬಿಟ್ಟ ಕಾರಣ ಆಸುಪಾಸಿನ ಶಾಲೆ, ಅಂಗನವಾಡಿಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ದಿನಕಳೆದಂತೆ ಕುಸಿಯತೊಡಗಿದೆ. ಉದ್ಯೋಗ ಖಾತ್ರಿ ಯೋಜನೆಗೆ ಕೆಲಸಕ್ಕೆ ತೆರಳಲೂ ಮಹಿಳೆಯರು ಹಿಂದೇಟು ಹಾಕುತ್ತಿದ್ದಾರೆ. ಜಾನುವಾರುಗಳನ್ನು ಮೇವಿಗೆ ಬಿಡಲಾಗದ ಪರಿಸ್ಥಿತಿಯಿದೆ ಎಂದು ಪಡ್ರೆ, ವಾಣಿನಗರ ಅಸುಪಾಸಿನ ಜನರು, ಪಡ್ರೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶುಕ್ರವಾರ ಆಯೋಜಿಸಲಾದ ಜಾಗೃತಿ ಸಭೆಯಲ್ಲಿ ಆತಂಕ ತೋಡಿಕೊಂಡರು.

ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಪ್ ಮಾತನಾಡಿ, ಅರಣ್ಯ ಇಲಾಖೆಯ ತಪ್ಪಿನಿಂದಾಗಿ ಊರಿನ ಜನರು ಭೀತಿಗೊಳಗಾಗಿದ್ದಾರೆ. ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವಿಧಾನಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.

ಎಣ್ಮಕಜೆ ಗ್ರಾಪಂ ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಸ್ಯೆಗೆ ಶಾಶ್ವತ ಪರಿಹಾರವಾಗದಿದ್ದಲ್ಲಿ ಊರವರನ್ನು ಒಟ್ಟು ಸೇರಿಸಿ ಹೋರಾಟ ನಡೆಸಲು ಪಂಚಾಯಿತಿ ಮುಂದಾಗಲಿದೆ ಎಂದರು.

ಜಿಲ್ಲಾ ಫಾರೆಸ್ಟ್ ಅಧಿಕಾರಿ ಅಶ್ರಫ್, ರೇಂಜ್ ಫಾರೆಸ್ಟ್ ಆಫೀಸರ್ ವಿನೋದ್ ಕುಮಾರ್ ಸಿ.ವಿ, ಸೆಕ್ಷನ್ ಪಾರೆಸ್ಟ್ ಆಫೀಸರ್ ವಿನೋದ್, ಪಿ.ಎಫ್ ಅರುಣ್, ಆರ್‌ಆರ್‌ಟಿ ಸೆಕ್ಷನ್ ಅಧಿಕಾರಿಗಳಾದ ಜಯ ಕುಮಾರ್, ರಾಜು, ಎಣ್ಮಕಜೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಪಂ.ಸದಸ್ಯರಾದ ನರಸಿಂಹ ಪೂಜಾರಿ, ರಾಮಚಂದ್ರ ಎಂ, ಪತ್ರಕರ್ತ ಶ್ರೀಪಡ್ರೆ, ಮುಖ್ಯಶಿಕ್ಷಕ ವಾಸುದೇವ ನಾಯಕ್, ರವಿ ವಾಣಿನಗರ ಮೊದಲಾದವರಿದ್ದರು.

ಚಿರತೆ ಸಂಚಾರದ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ತಪ್ಪು ಸಂದೇಶ ರವಾನೆಯಾಗುತ್ತಿದ್ದು, ಸೈಬರ್‌ಸೆಲ್ ಮೂಲಕ ಅವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜತೆಗೆ ಜನರ ಭೀತಿ ದೂರೀಕರಿಸಲು ಇಲಾಖೆ ಬದ್ಧವಾಗಿದ್ದು, ಈ ಬಗ್ಗೆ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ. ಅಶ್ರಫ್, ಜಿಲ್ಲಾ ಅರಣ್ಯಾಧಿಕಾರಿ https://www.vijayavani.net/vatapura-kshetra-brahmarathotsava https://www.vijayavani.net/today-is-pratristapana-vardhantyutsava-horekanike-procession