ಜಿಲ್ಲೆ

ಪ್ಲಾಸ್ಟಿಕ್​ಚೀಲ ಮುಕ್ತ ದಿನಕ್ಕೆ ಬಿಬಿಎಂಪಿಯಿಂದ ಜಾಗೃತಿ ಜಾಥಾ

ಆರ್.ತುಳಸಿಕುಮಾರ್

ಬೆಂಗಳೂರು: ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಚೀಲಮುಕ್ತ ದಿನದ ಅಂಗವಾಗಿ, ಪೂರ್ವ ವಲಯ ಹೆಬ್ಬಾಳ ವಿಭಾಗದ ಮುನಿರೆಡ್ಡಿಪಾಳ್ಯ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧದ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಜಾಥಾಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಬುಧವಾರ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ನಗರದಾದ್ಯಂತ ಒಮ್ಮೆ ಬಳಸುವ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಬಟ್ಟೆ ಚೀಲ ಅಥವಾ ಪೇಪರ್ ಚೀಲಗಳನ್ನು ಮಾತ್ರ ಬಳಸಲು ನಾಗರಿಕರು ಹಾಗೂ ವ್ಯಾಪಾರಿಗಳಲ್ಲಿ ಹೆಚ್ಚಾಗಿ ಅರಿವು ಮೂಡಿಸಬೇಕು. ಬೀದಿ ಬದಿ ವ್ಯಾಪಾರಿಗಳು, ಅಂಗಡಿ-ಮುಂಗಟ್ಟುಗಳಲ್ಲಿ ಮಾರಾಟ ಮಾಡುವವರಿಗೆ ಯಾವ್ಯಾವ ಪ್ಲಾಸ್ಟಿಕ್ ನಿಷೇಧವಾಗಿದೆ, ಯಾವುದನ್ನು ಬಳಸಲು ಅನುಮತಿಯಿದೆ ಎಂಬುದರ ಬಿತ್ತಿಪತ್ರಗಳನ್ನು ನೀಡಿ ಅರಿವು ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಅಂಗಡಿಗಳಿಗೆ ಭೇಟಿ ನೀಡಿ ಬಟ್ಟೆ ಬ್ಯಾಗ್ ವಿತರಣೆ:

ಜಾಗೃತಿ ಜಾಥಾ ವೇಳೆ ಬೀದಿ ಬದಿ ವ್ಯಾಪಾರಿಗಳು ಹಾಗೂ ಅಂಗಡಿಗಳ ಬಳಿ ತೆರಳಿ ಬಿತ್ತಿಪತ್ರಗಳನ್ನು ವಿತರಿಸುವ ಜತೆಗೆ ಬಟ್ಟೆ ಚೀಲಗಳನ್ನು ವಿತರಿಸಲಾಯಿತು. ಇನ್ನು ಮುಂದೆ ಪ್ಲಾಸ್ಟಿಕ್ ಚೀಲಗಳನ್ನು ಬಳಸದೆ ಇದೇ ರೀತಿಯ ಬಟ್ಟೆ ಚೀಲಗಳನ್ನು ಮಾತ್ರ ಬಳಸಬೇಕು. ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಚೀಲಗಳನ್ನು ಬಳಸಬಾರದು ಎಂದು ಕಿವಿಮಾತು ಹೇಳಿದರು.

ಎಳನೀರು ಮಾರಾಟ ಮಾಡುವವರಿಗೆ ಪೇಪರ್ ಸ್ಟ್ರಾ ವಿತರಣೆ ಮಾಡಿ ಪ್ಲಾಸ್ಟಿಕ್‌ನಿಂದ ತಯಾರಿಸಿದ ಉತ್ಪನ್ನಗಳನ್ನು ಯಾವುದೇ ಕಾರಣಕ್ಕೂ ಬಳಸದಂತೆ ವಿನಂತಿಸಿದರು. ಇದೇ ವೇಳೆ ಸಾರ್ವಜನಿಕರಿಗೆ ಮನೆಯಿಂದಲೇ ಕೈ ಚೀಲಗಳನ್ನು ತರಲು ಅಭ್ಯಾಸ ಮಾಡಿಕೊಳ್ಳಬೇಕು.ಇಲ್ಲವಾದಲ್ಲಿ ಸ್ಥಳಿಯವಾಗಿ ಲಭ್ಯವಿರುವ ಬಟ್ಟೆ ಚೀಲಗಳನ್ನು ಖರೀದಿಸುವಂತೆ ಮುಖ್ಯ ಆಯುಕ್ತರು ಮನವಿ ಮಾಡಿದರು.

ಜಾಥಾದಲ್ಲಿ ಪೂರ್ವ ವಲಯ ಆಯುಕ್ತೆ ಸ್ನೇಹಲ್, ಜಂಟಿ ಆಯುಕ್ತೆ ಸರೋಜಾ, ಘನತ್ಯಾಜ್ಯ ವಿಭಾಗದ ಅಧೀಕ್ಷಕ ಅಭಿಯಂತರ ವಿಶ್ವನಾಥ್, ಆರೋಗ್ಯಾಧಿಕಾರಿಗಳು, ಸ್ಥಳೀಯ ಕ್ಷೇಮಾಭಿವೃದ್ದಿ ಸಂಘದ ಸದಸ್ಯರು, ಸ್ಥಳಿಯರು ಸೇರಿ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

ಮೊದಲು ಎಚ್ಚರಿಕೆ ನಂತರ ದಂಡ:

ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಸುವವರಿಗೆ ಪ್ಲಾಸ್ಟಿಕ್ ಚೀಲ ಬಳಸುತ್ತಿದ್ದರೆ ಮೊದಲು ಎಚ್ಚರಿಕೆ ನೀಡುತ್ತೇವೆ. ಇದು ಪುನರಾವರ್ತಿತವಾದಲ್ಲಿ ದಂಡ ವಿಧಿಸಲಾಗುವುದು. ಒಮ್ಮೆ ಬಳಸುವ ಪ್ಲಾಸ್ಟಿಕ್ ಪರಿಸಕ್ಕೆ ಹಾನಿಕಾರಕವಾಗಿದ್ದು, ಅದನ್ನು ನಾವೆಲ್ಲರೂ ಸೇರಿ ನಿಷೇಧಿಸೋಣ ಎಂದು ಅರಿವು ಮೂಡಿಸಲಾಯಿತು.