ಹುಬ್ಬಳ್ಳಿ: ಕಣ್ಣಿನ ತೊಂದರೆಗಳು ಈಗ ವಿಧವಾಗಿ ಕಾಡುತ್ತಿವೆ. ಇದಕ್ಕೆ ಜಾಗೃತಿಯೇ ಪರಿಹಾರ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಅಭಿಪ್ರಾಯಪಟ್ಟರು.
ನಗರದ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯಲ್ಲಿ ಸೋಮವಾರ ಏರ್ಪಡಿಸಿದ್ದ ವಿಶ್ವ ಆಪ್ಟೊಮೆಟ್ರಿ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ತಂತ್ರಜ್ಞಾನವಿದ್ದರೂ ಕಣ್ಣಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಮಕ್ಕಳಿಂದ ವಯಸ್ಸಾದವರವರೆಗೂ ಸಮಸ್ಯೆ ಇದೆ. ಎಂ.ಎಂ. ಜೋಶಿ ಆಸ್ಪತ್ರೆ ಇಂಥ ಸವಾಲು ಎದುರಿಸಲು ಸಿದ್ಧವಾಗಿದೆ. ಕರ್ನಾಟಕವನ್ನು ಅಂಧತ್ವ ಮುಕ್ತ ಮಾಡಲು ಹೊರಟಿರುವುದು ಶ್ಲಾಘನೀಯ ಕಾರ್ಯ ಎಂದು ಬಣ್ಣಿಸಿದರು.
ನಮ್ಮಲ್ಲಿನ ಮನೋತ್ಯಾಜ್ಯ ದೂರ ಮಾಡಲು ಓದು ನಿರಂತರವಾಗಿರಬೇಕು. ನಮ್ಮ ಚಿಂತನೆ, ದೂರದೃಷ್ಟಿ ಎಲ್ಲವನ್ನೂ ಓದು ಕಲ್ಪಿಸಿಕೊಡುತ್ತದೆ ಎಂದು ಬುದ್ಧನ ಕತೆ ಹೇಳುವ ಮೂಲಕ ವಿವರಿಸಿದರು.
ಡಾ. ಎಂ.ಎಂ. ಜೋಶಿ ಅವರಿಗೀಗ 90 ವರ್ಷ. ಆದರೂ ಅವರು ಆರೋಗ್ಯದಿಂದ ಇದ್ದಾರೆ. ಇದಕ್ಕೆ ಕಾರಣ ಅವರು ಸಮಾಜಮುಖಿಯಾಗಿ ಮಾಡುತ್ತಿರುವ ಕೆಲಸ ಎಂದು ಶ್ಲಾಘಿಸಿದರು.
ಆಸ್ಪತ್ರೆ ನಿರ್ದೇಶಕ ಡಾ. ಶ್ರೀನಿವಾಸ ಜೋಶಿ ಮಾತನಾಡಿ, ನಮ್ಮ ಸಂಸ್ಥೆಯಿಂದ ರಾಜ್ಯಾದ್ಯಂತ ದೃಷ್ಟಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ನಮ್ಮ ಉದ್ದೇಶ ಅನಗತ್ಯ ಅಂಧತ್ವ ನಿವಾರಣೆ ಮಾಡುವುದು. ಇದಕ್ಕೆ ಸಂಘ-ಸಂಸ್ಥೆಗಳು, ಸರ್ಕಾರ ಕೈ ಜೋಡಿಸುತ್ತಿರುವುದು ಸಂತಸದ ವಿಷಯ ಎಂದರು.
ಸಂಸ್ಥೆಯ ಚೇರ್ಮನ್ ಪದ್ಮಶ್ರೀ ಡಾ.ಎಂ.ಎಂ. ಜೋಶಿ ಅಧ್ಯಕ್ಷತೆ ವಹಿಸಿದ್ದರು.
ನಿರ್ದೇಶಕರಾದ ಡಾ.ಎ.ಎಸ್. ಗುರುಪ್ರಸಾದ, ಡಾ. ಕೃಷ್ಣಪ್ರಸಾದ ಆರ್., ಎಂ.ಎಂ. ಜೋಶಿ ಕಣ್ಣಿನ ಸಂಸ್ಥೆಯ ಆಪ್ಟೊಮೆಟ್ರಿ ಕಾಲೇಜ್ ಪ್ರಾಚಾರ್ಯೆ ಡಾ. ವಿಜಯಲಕ್ಷ್ಮೀ ಕೋರಿ, ಉಪನ್ಯಾಸಕ ಪ್ರದೀಪ ಬಿ.ವಿ., ಇತರರು ಇದ್ದರು.