ಜಿಲ್ಲೆ

ವಂಚನೆ ತಡೆಗಟ್ಟುವ ಬಗ್ಗೆ ಜಾಗೃತಿ ಅಗತ್ಯ

ನಾಗೇಶ ಎಸ್

ಹಾಸನ: ಆರ್ಥಿಕ ಸಾಕ್ಷರತೆ ವ್ಯಕ್ತಿಯ ಜೀವನದ ಪ್ರಮುಖ ಅಂಶವಾಗಿದ್ದು, ಸರ್ಕಾರಿ ವಿಮಾ ಯೋಜನೆಗಳನ್ನು ಬಳಸುವುದು ಮತ್ತು ವಂಚನೆ ತಡೆಗಟ್ಟುವ ಕ್ರಮಗಳ ಬಗ್ಗೆ ಜಾಗೃತಿ ಅಗತ್ಯ ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕಿ ಲತಾ ಸರಸ್ವತಿ ತಿಳಿಸಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಬುಧವಾರ ಮೈಕ್ರೋ ಫೈನಾನ್ಸ್ ಇಂಡಸ್ಟ್ರಿ ನೆಟ್‌ವರ್ಕ್ ವತಿಯಿಂದ ಫೈನಾನ್ಸ್ ಜಾಗೃತಿ ಕಾರ್ಯಕ್ರಮದ ಅಡಿಯಲ್ಲಿ ಆರ್ಥಿಕ ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಆರ್ಥಿಕ ಸಾಕ್ಷರತೆ ಪ್ರತಿ ವ್ಯಕ್ತಿಯ ಜೀವನದ ಪ್ರಮುಖ ಅಂಶವಾಗಿದೆ. ಬಜೆಟ್ ನಿರ್ವಹಣೆ, ಹೂಡಿಕೆ, ಸಾಲದ ಆಯ್ಕೆಗಳು, ವಿಮಾ ರಕ್ಷಣೆ, ಸರ್ಕಾರಿ ವಿಮಾ ಯೋಜನೆಗಳನ್ನು ಬಳಸುವುದು ಮತ್ತು ವಂಚನೆ ತಡೆಗಟ್ಟುವ ಕ್ರಮಗಳು ಸೇರಿದಂತೆ ವಿವಿಧ ಹಣಕಾಸು ವಿಷಯಗಳ ಕುರಿತು ಪ್ರತಿಯೊಬ್ಬರೂ ಅಗತ್ಯ ತಿಳಿವಳಿಕೆ ಹೊಂದಿರಬೇಕು ಎಂದು ಸಲಹೆ ನೀಡಿದರು.

ಮೈಕ್ರೋಫೈನಾನ್ಸ್ ಇಂಡಸ್ಟ್ರಿ ನೆಟ್‌ವರ್ಕ್ ಅಧಿಕಾರಿ ಎಂ.ಎಸ್. ಮಂಜುನಾಥ್ ಮಾತನಾಡಿ, ಎಂಎಫ್‌ಐಎಂ ಸದಸ್ಯರಾಗಿರುವ ಎಲ್ಲ ಮೈಕ್ರೋಫೈನಾನ್ಸ್ ಕಂಪನಿಗಳು ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ನಿಯಂತ್ರಿಸಲ್ಪಡುತ್ತವೆ. ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶ 2025 ಅನಿಯಂತ್ರಿತ ಘಟಕಗಳ ಕಾರ್ಯಾಚರಣೆಗಳನ್ನು ನಿಯಂತ್ರಿಸುವ ಉದ್ದೇಶವನ್ನು ಹೊಂದಿದೆ ಮತ್ತು ಈ ಸುಗ್ರೀವಾಜ್ಞೆಯು ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ನೋಂದಾಯಿಸಲಾದ ಬ್ಯಾಂಕ್‌ಗಳು, ಸಣ್ಣ ಹಣಕಾಸು ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಕಂಪನಿ ಮೈಕ್ರೋಫೈನಾನ್ಸ್ ಸಂಸ್ಥೆಗಳಿಗೆ ಅನ್ವಯಿಸುವುದಿಲ್ಲ ಎಂದರು.

ತಹಸೀಲ್ದಾರ್ ಶ್ರೇಣಿ-2 ಯು.ಎಂ.ಮೋಹನ್‌ಕುಮಾರ್ ಮಾತನಾಡಿ, ಮಹಿಳೆಯರು ಸಾಲವನ್ನು ಅವಶ್ಯಕತೆಯಿದ್ದರೆ ಮಾತ್ರ ಪಡೆಯಬೇಕು ಹಾಗೂ ಮೈಕ್ರೋಫೈನಾನ್ಸ್ ಸಾಲಗಳನ್ನು ಆಧಾಯೋತ್ಪನ್ನ ಚಟುವಟಿಕೆಗೆ ಬಳಸಿ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬೇಕು. ಪಡೆದ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿಸುವುದರಿಂದ ಅವಶ್ಯಕತೆಯಿದ್ದಾಗ ಆರ್‌ಬಿಐ ನಿಯಂತ್ರಿತ ಸಂಸ್ಥೆಗಳಿಂದ ಸಾಲ ಪಡೆಯುವುದು ಸೂಕ್ತ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಕ್ರೆಡಿಟ್ ಆಕ್ಸಸ್ ಗ್ರಾಮೀಣ್ ಲಿಮಿಟೆಡ್ ಸಂಸ್ಥೆ ವಲಯ ವ್ಯವಸ್ಥಾಪಕ ಎಂ.ಕೆ.ಲೋಕೇಶ್, ಪ್ರಾದೇಶಿಕ ವ್ಯವಸ್ಥಾಪಕರು ಪ್ರದೀಪ್, ಗ್ರಾಮೀಣ ಕೂಟ ಸಂಸ್ಥೆಯ ಡಿವಿಜನಲ್ ಮ್ಯಾನೇಜರ್ ಸಿ.ವಿ.ಲೋಕೇಶ್, ಮೋಹನ್, ಚಿದಾನಂದ್, ಚೈತನ್ಯ ಇಂಡಿಯಾ ಫೈನಾನ್ಸ್ ನವೀನ್ ಕುಮಾರ್ ಇದ್ದರು.