ಹಾಸನ: ಆಂಗ್ಲ ಭಾಷೆ ಸೇರಿದಂತೆ ಬೇರೆ ಭಾಷೆಗಳ ಕಲಿಯಬೇಕೆಂಬ ವ್ಯಾಮೋಹ ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಹಾಗಾಗಿ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಮಾತೃ ಭಾಷೆಯಾದ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಲು ಮೊದಲು ಜಾಗೃತರಾಗಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ಜಿಲ್ಲಾ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿ, ಧ್ವಜಾರೋಹಣ ನೆರವೇರಿಸಿ, ಗೌರವ ಸ್ವೀಕರಿಸಿದ ನಂತರ ಮಾತನಾಡಿ, ಬಹಳ ವೇಗವಾಗಿ ಸಮಯ ಕಳೆಯುತ್ತಿದೆ. ನಾವು ಕೇವಲ ಇತಿಹಾಸ ಮೆಲುಕು ಹಾಕಿದರೆ ಸಾಲದು, ಇಂದಿನ ಸವಾಲುಗಳನ್ನು ಎದುರಿಸಬೇಕಾದ ಅವಶ್ಯಕತೆ ಇದೆ ಎಂದರು.
ಪ್ರಸ್ತುತ 21ನೇ ಶತಮಾನದಲ್ಲಿದ್ದೇವೆ. ಇದು ಬದಲಾವಣೆಯ ಯುಗವಾಗಿದೆ. ನಮ್ಮ ಮನೆಗಳಲ್ಲಿ ನಮ್ಮ ಮಾತೃಭಾಷೆ ಮತ್ತು ಅದರ ಸಂಸ್ಕೃತಿಯನ್ನು ಉಳಿಸಲು ದಿನದಿಂದ ದಿನಕ್ಕೆ ಕಷ್ಟವಾಗುತ್ತಿದೆ. ಪಾಶ್ಚಿಮಾತ್ಯರ ಭಾಷೆ ಮತ್ತು ಅದರ ಸಂಸ್ಕೃತಿಯ ವ್ಯಾಮೋಹ ಹೆಚ್ಚಾಗುತ್ತಿದೆ. ಭಾಷೆ ಕಲಿಯಬೇಕು. ಆದರೆ ಅದನ್ನು ಅವಶ್ಯಕತೆಗೆ ತಕ್ಕ ಹಾಗೆ ಕಲಿಯಬೇಕು. ನಮ್ಮ ತಾಯಿ ಭಾಷೆಯನ್ನು ಎಂದಿಗೂ ಮರೆಯಬಾರದು ಎಂದು ತಿಳಿಸಿದರು.
ಒಂದು ಕಡೆ ಇಂಗ್ಲಿಷ್ ಭಾಷೆಯ ವ್ಯಾಮೋಹ ನಮ್ಮನ್ನು ಸೆಳೆಯುತ್ತಿದ್ದರೆ, ಮತ್ತೊಂದು ಕಡೆ ಕೇಂದ್ರ ಸರ್ಕಾರ ನಮ್ಮ ಭಾಷೆಯ ಮೇಲೆ ಹಿಂದಿಯನ್ನು ಬಲವಂತವಾಗಿ ಹೇರುತ್ತಿದೆ. ಪ್ರತ್ಯಕ್ಷ, ಪರೋಕ್ಷವಾಗಿ ಸ್ಥಳೀಯ ಭಾಷೆಗಳನ್ನು ಬದಿಗೊತ್ತಿ ಹಿಂದಿ ಭಾಷೆಯನ್ನು ಹೇರುತ್ತಿರುವುದು ನಮಗೆ ಆತಂಕ ಮತ್ತು ನಮ್ಮ ಭಾಷೆ, ಸಂಸ್ಕೃತಿಗೆ ಆಪತ್ತನ್ನು ಉಂಟು ಮಾಡುತ್ತಿದೆ. ಈ ಎರಡು ನಮಗೆ ಇಂದಿನ ಸವಾಲುಗಳಾಗಿವೆ. ಎರಡು ವಿಚಾರಗಳಲ್ಲಿ ನಾವು ಜಾಗೃತರಾಗಬೇಕು ಎಂದರು.
1956ರಲ್ಲಿ ಏಕೀಕರಣವಾಗಿ, ಮೈಸೂರು ರಾಜ್ಯ ರಚನೆಯಾಗಿ, ನಂತರ 1973ರಲ್ಲಿ ನಾಮಕರಣವಾಗಿ, ಬಹುತೇಕ ಕನ್ನಡ ಭಾಷೆ ಸಂಸ್ಕೃತಿ ಅನುಸರಿಸುವ ಜನಗಳನ್ನು ಒಂದುಗೂಡಿಸಿ ಕನ್ನಡ ಭಾಷಿಕರನ್ನು ಏಕೀಕರಣ ಮಾಡಿದಂತಹ ಕೆಲಸವಾಗಿದೆ ಎಂದರು.
ಬೇರೆ ಬೇರೆ ಪ್ರಾಂತ್ಯಗಳಲ್ಲಿ ಹರಿದು ಹೋಗಿದ್ದಂತಹ ನಮ್ಮ ಭಾಷೆಯನ್ನು ಕನ್ನಡಿಗರು ಹೋರಾಟ ಮಾಡಿ, ಎಲ್ಲ ಕನ್ನಡಿಗರು ಒಂದೇ ಸೂರಿನಡಿ ಸೇರಬೇಕೆಂದು, ಅವಿರತ ಹೋರಾಟ ಮಾಡಿದ್ದಾರೆ. ಅದಕ್ಕೆ ಸಹಕಾರವನ್ನು ಕೊಟ್ಟು ಕರ್ನಾಟಕ ಏಕೀಕರಣಕ್ಕೆ ರಾಷ್ಟ್ರಮಟ್ಟದಲ್ಲಿ ಕಾರಣಿಕರ್ತರಾದವರು ಜವಾಹರ್‌ಲಾಲ್ ನೆಹರು. ಅವರು ಅಂದು ಭಾಷಾವಾರು ರಾಜ್ಯವನ್ನು ರಚನೆ ಮಾಡಲು ಸಂಕಲ್ಪ ಮಾಡಿದ ಪ್ರಯುಕ್ತ ಕರ್ನಾಟಕದ ಜನ ಒಂದು ಭಾಗದಲ್ಲಿ ನೆನೆಸಲು ಸಾಧ್ಯವಾಯಿತು ಎಂದರು.
ರಾಜ್ಯದ ಎಲ್ಲ ಕನ್ನಡ ಭಾಷಿಕರ ಮನಸ್ಸಿನ ಆಸೆಯಂತೆ ದೇವರಾಜು ಅರಸು ಅವರು ಮುಖ್ಯ ಮಂತ್ರಿಯಾಗಿದ್ದಾಗ ಕರ್ನಾಟಕ ಎಂದು 1973ರಲ್ಲಿ ವಿಧಾನಸಭೆಯ ಎಲ್ಲ ಶಾಸಕರುಗಳ ಒಕ್ಕೊರಲಿನಿಂದ ತೀರ್ಮಾನ ಮಾಡಿ ಕರ್ನಾಟಕ ಎಂದು ನಾಮಕರಣ ಮಾಡಿರುವಂತದು ಇತ್ತೀಚಿನ ಇತಿಹಾಸವಾಗಿದೆ ಎಂದರು.
ಜಿಲ್ಲೆಯ ಇತಿಹಾಸವನ್ನು ನೋಡುತ್ತಾ ಹೋದರೆ ಕನ್ನಡ ಸಾಹಿತ್ಯಕ್ಕೆ ಸಂಗೀತಕ್ಕೆ ಶಿಲ್ಪಕಲೆಗೆ ಜಿಲ್ಲೆ ನೀಡಿರುವ ಕೊಡುಗೆ ಅಪಾರವಾಗಿದೆ.
ಇತ್ತೀಚೆಗೆ ಇದೇ ಜಿಲ್ಲೆಯವರಾದ ಬಾನು ಮುಷ್ತಾಕ್ ಅವರು ತಾವು ಬರೆದ ಕೃತಿಗೆ ಪ್ರಪಂಚದ ಶ್ರೇಷ್ಠ ಸಾಹಿತ್ಯ ಪ್ರಶಸ್ತಿಗಳಲ್ಲಿ ಒಂದಾದ ಬೂಕರ್ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಕನ್ನಡ ಭಾಷೆಗೆ ಮತ್ತಷ್ಟು ಗೌರವವನ್ನು ತಂದುಕೊಟ್ಟಿದ್ದಾರೆ. ಅದೇ ರೀತಿ ಕನ್ನಡ ನಾಡಿಗೆ ಮತ್ತಷ್ಟು ಕೊಡುಗೆಯನ್ನು ಕೊಟ್ಟಂತಹ ಎಸ್.ಎಲ್.ಭೈರಪ್ಪನವರು ಕೂಡ ಇದೇ ಜಿಲ್ಲೆಯವರಾಗಿದ್ದಾರೆ ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಕನ್ನಡ ರಾಜ್ಯೋತ್ಸವ 2025ರ ಅಂಗವಾಗಿ ಕನ್ನಡ ಬೃಹತ್ ಧ್ವಜ ಮೆರವಣಿಗೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಲತಾ ಕುಮಾರಿ ಚಾಲನೆ ನೀಡಿದರು.
ಸಂಸದ ಶ್ರೇಯಸ್ ಎಂ.ಪಟೇಲ್, ಶಾಸಕ ಸ್ವರೂಪ್ ಪ್ರಕಾಶ್, ಮಹಾನಗರ ಪಾಲಿಕೆಯ ಮಹಾಪೌರರಾದ ಗಿರೀಶ್ ಚನ್ನವೀರಪ್ಪ, ಉಪ ಮೇಯರ್ ಹೇಮಾಲತಾ, ಜಿಲ್ಲಾಧಿಕಾರಿ ಲತಾ ಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜಿತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಪೂರ್ಣಿಮಾ, ಅಪರ ಜಿಲ್ಲಾಧಿಕಾರಿ ಮಂಜುನಾಥ್ ಇತರರು ಇದ್ದರು.
ಮೆಚ್ಚುಗೆಗೆ ಪಾತ್ರವಾದ ಸಾಂಸ್ಕೃತಿಕ ಕಾರ್ಯಕ್ರಮ
ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯ ವತಿಯಿಂದ ಜಿಲ್ಲಾ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ವೈಭವಯುತವಾಗಿತ್ತು.
ಆಕರ್ಷಕ ಪಥಸಂಚಲನ: ಕೆಎಸ್‌ಆರ್‌ಪಿ, ಡಿಎಆರ್, ನಾಗರೀಕ ಪೊಲೀಸ್ ತಂಡ, ಮಹಿಳಾ ಪೊಲೀಸ್ ತಂಡ, ಗೃಹ ರಕ್ಷಕ ದಳ, ಅರಣ್ಯ ಇಲಾಖೆ ತಂಡ, ಅಬಕಾರಿ ಇಲಾಖೆ ತಂಡ, ಎನ್‌ಸಿಸಿ, ಸೇವಾದಳ ಹಾಗೂ ಶಾಲಾ ಮಕ್ಕಳು ಸೇರಿದಂತೆ ಒಟ್ಟು 38 ತುಕಡಿಗಳಿಂದ ಆಕರ್ಷಕ ಪಥಸಂಚಲನ ಮೂಡಿಬಂದಿತು.
ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ
ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ಜಿಲ್ಲಾ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವವರನ್ನು ಸನ್ಮಾನಿಸಲಾಯಿತು.
ಸಮಾಜ ಸೇವಾ ಕ್ಷೇತ್ರದಲ್ಲಿ ಕಾಳಾಚಾರ್, ಎನ್.ಟಿ.ಶ್ರೀನಿವಾಸ್, ಕೆ.ಸಿ.ರವಿಚಂದ್ರ, ದಯಾನಂದ, ಗಿರಿತೇಜ, ವಿಜಯಾ, ಅನ್ನಪೂರ್ಣ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹಿರಿಯ ಪತ್ರಕರ್ತ ಚೌಡಳ್ಳಿ ಜಗದೀಶ್, ನ್ಯೂಸ್ ಕ್ಯಾಮರಾಮನ್ ಶರತ್, ರಂಗಭೂಮಿ ಕ್ಷೇತ್ರದಲ್ಲಿ ಸಾವಿತ್ರಿ ಗಂಗಾಧರ್, ಎಚ್.ಡಿ.ರವಿ, ಕೆ.ಟಿ.ಸತ್ಯಮೂರ್ತಿ, ವೈ.ಎಸ್.ಮಾರುತಿ, ವಿ.ಆರ್.ಲೋಕೇಶ್, ಆರ್.ಟಿ.ಜಗದೀಶ್, ಸಂಗೀತ ಕ್ಷೇತ್ರದಲ್ಲಿ ಟಿ.ಆರ್. ಸ್ವಾಮಿ, ಜಯಶ್ರೀ ಬಾಲಕೃಷ್ಣ, ಎಚ್.ಎಸ್.ಮಂಜುನಾಥ್, ವೇದಾವತಿ, ಬಿ.ಎಸ್.ವಿಜಯ್ ಕುಮಾರ್, ಕಲಾ ಕ್ಷೇತ್ರದಲ್ಲಿ ಭಗವಾನ್ ಸಿಂಗ್, ಸಂಪತ್, ಎಚ್.ಕೆ.ಮಂಜುನಾಥ, ಸುಕನ್ಯಾ ಮುಕುಂದ, ಸಾಹಿತ್ಯ ಕ್ಷೇತ್ರದಲ್ಲಿ ಎಚ್.ಡಿ.ಪ್ರದೀಪ್, ಸುಮಾ ರಮೇಶ್, ಸುಜಲಾದೇವಿ, ಕ್ರೀಡಾ ಕ್ಷೇತ್ರದಲ್ಲಿ ಜೆ.ಐ.ನಿರಂಜನ್, ಶಿಕ್ಷಣ ಕ್ಷೇತ್ರದಲ್ಲಿ ಗಂಗಾಧರ, ಪಾರ್ಥೇಶ ಅವರನ್ನು ಸನ್ಮಾನಿಸಲಾಯಿತು.