ಶ್ರೀರಂಗಪಟ್ಟಣ ತಾಲೂಕು ನೆಲಮನೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೆಂಕಿ ನಂದಿಸುವ ಕುರಿತು ಕಲ್ಪಿತ ಪ್ರದರ್ಶನ ನಡೆಯಿತು. ಎಸ್‌ಆರ್‌ಪಿ ಚಿತ್ರ :15-01(ಎ): ಶ್ರೀರಂಗಪಟ್ಟಣ ತಾಲೂಕು ನೆಲಮನೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಅಗ್ನಿ ಅವಘಡಗಳ ಕುರಿತು ಅಗ್ನಿಶಾಮಕ ದಳದ ಸಿಬ್ಬಂದಿ ಪ್ರಾತ್ಯಕ್ಷಿಕೆ ನೀಡಿದರು. 
ಜಿಲ್ಲೆ

ಬೆಂಕಿ ಅವಘಡ ತಡೆಗೆ ಜಾಗೃತಿ ಅಗತ್ಯ

ಶ್ರೀರಂಗಪಟ್ಟಣ: ಅಗ್ನಿ ಅನಾಹುತಗಳು ಸಂಭವಿಸಿದಾಗ ಗಾಬರಿಗೊಳ್ಳದೆ ಬೆಂಕಿ ನಂದಿಸಲು ಅಗತ್ಯ ಕ್ರಮಕೈಗೊಳ್ಳಬೇಕು. ಜತೆಗೆ ಸಮೀಪದ ಅಗ್ನಿಶಾಮಕ ಠಾಣೆಗಳಿಗೆ ಕೂಡಲೇ ಮಾಹಿತಿ ನೀಡಬೇಕು ಎಂದು ಶ್ರೀರಂಗಪಟ್ಟಣ ಅಗ್ನಿ ಶಾಮಕ ಠಾಣಾಧಿಕಾರಿ ಅಂಬರೀಶ್ ಉಪ್ಪಾರ್ ತಿಳಿಸಿದರು.

ತಾಲೂಕಿನ ನೆಲಮನೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಶಾಲಾ ಶಿಕ್ಷಣ ಇಲಾಖೆ, ಬಲ್ಲೇನಹಳ್ಳಿ ಡಿಜಿಟಲ್ ಗ್ರಂಥಾಲಯ ಹಾಗೂ ಅರಿವು ಕೇಂದ್ರ ಮತ್ತು ಬೆಂಗಳೂರಿನ ಸುಕೃತ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾಗಿರುವ ಗ್ರಾಮೀಣ ಮಕ್ಕಳ ಚೈತ್ರದ ಚಿಗುರು ಉಚಿತ ಬೇಸಿಗೆ ಶಿಬಿರದ ಕಾರ್ಯಕ್ರಮದಲ್ಲಿ ಅಗ್ನಿ ಅವಘಡ ಕುರಿತು ಪ್ರಾತಕ್ಷಿತೆ ನೀಡಿ ಮಾತನಾಡಿದರು.

ಮನೆಗಳಲ್ಲಿರುವ ಅನಿಲ ಸಿಲಿಂಡರ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಾಗ ಅಥವಾ ಯಾವುದೇ ತೈಲ ರೂಪದ ವಸ್ತುಗಳಿಂದ ಬೆಂಕಿ ಹೊತ್ತಿಕೊಂಡಾಗ ಮೊದಲು ಜನರು ಸುರಕ್ಷಿತ ಜಾಗಕ್ಕೆ ತೆರಳಬೇಕು. ನೀರಿನಲ್ಲಿ ನೆನೆಸಿದ ಗೋಣಿ ಚೀಲ ಅಥವಾ ಬೆಡ್ ಶೀಟ್‌ಗಳಿಂದ ಗಟ್ಟಿಯಾಗಿ ಬೆಂಕಿಗೆ ಆಮ್ಲಜನಕ ಪೂರೈಕೆ ಆಗದಂತೆ ತಡೆಯಬೇಕು. ವಿದ್ಯುತ್ ಅವಘಡಗಳಿಂದ ಬೆಂಕಿ ಹೊತ್ತಿದ್ದಲ್ಲಿ ತಕ್ಷಣ ತುರ್ತು ರಕ್ಷಣಾ ಪಡೆ ಹಾಗೂ ಅಗ್ನಿಶಾಮಕ ಠಾಣೆಗೆ ಕಡ್ಡಾಯವಾಗಿ ತಕ್ಷಣ ಮಾಹಿತಿ ರವಾನಿಸಬೇಕು. ನೀರು, ಗಾಳಿ ಹಾಗೂ ಬೆಂಕಿಯ ವಿಚಾರದಲ್ಲಿ ಯಾರೇ ಆಗಲಿ ನಿರ್ಲಕ್ಷ ವಹಿಸದೆ ಎಚ್ಚರಿಕೆ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಗ್ರಾಮೀಣ ಭಾಗದ ಸರ್ಕಾರಿ ಶಾಲೆಯಲ್ಲಿ ಚೈತ್ರದ ಚಿಗುರು ಬೇಸಿಗೆ ಶಿಬಿರದ ಮೂಲಕ ಅಚ್ಚುಕಟ್ಟಾಗಿ ನಡೆಸಿಕೊಡುವ ಜತೆಗೆ ನೂರಾರು ಮಕ್ಕಳ ಶಿಕ್ಷಣ ಅಭ್ಯುದಯಕ್ಕಾಗಿ ತರಬೇತಿ ನೀಡುತ್ತಿರುವುದು ಶ್ಲಾಘನೀಯ. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ ಮೌಲ್ಯಯುತ ಶಿಕ್ಷಣದ ಜತೆಗೆ ಬಾಲ್ಯದಲ್ಲೇ ಸಾಮಾಜಿಕ ಸೇವಾ ಮನೋಭಾವವನ್ನು ರೂಢಿಸಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ಬೆಂಕಿ ನಂದಿಸುವ ಕುರಿತು ಕಲ್ಪಿತ ಪ್ರದರ್ಶನ ನೀಡಲಾಯಿತು. ಅಗ್ನಿಶಾಮಕ ದಳದ ತೇಜೋಮೂರ್ತಿ, ನಂದನ್, ಮುರಳಿ, ನೂರ್‌ಸಾಬ್, ಶ್ರೀಶೈಲಕುರಿ, ಶಾಲೆ ಮುಖ್ಯಶಿಕ್ಷಕ ಕೃಷ್ಣಪ್ಪ, ಸಹ ಶಿಕ್ಷಕರಾದ ಸಾಗರ್, ಲಕ್ಷ್ಮೀ, ಸವಿತಾ, ಎಸ್‌ಡಿಎಂಸಿ ಅಧ್ಯಕ್ಷೆ ಜ್ಯೋತಿ ರಮೇಶ್, ಸದಸ್ಯ ರಘು, ಗ್ರಂಥಪಾಲಕ ಹಾಗೂ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಗ್ರಂಥಪಾಲಕ ಕೂಡಲಕುಪ್ಪೆ ಸೋಮಶೇಖರ್ ಮತ್ತಿತರರಿದ್ದರು.